ಮೈಸೂರು: ವಿನಯ, ಸನ್ನಡತೆ, ಶಿಸ್ತಿಗೆ ಶ್ರೀಮಂತಿಕೆಯ ಅಗತ್ಯವಿಲ್ಲ. ವಿದ್ಯಾರ್ಥಿಗಳ ಸಾಧನೆಗೆ ಪರಿಶ್ರಮ ಅತ್ಯಂತ ಅವಶ್ಯಕ ಎಂದು ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಗಜೇಂದ್ರ ಪ್ರಸಾದ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿಜಯ ವಿಠಲ ವಿದ್ಯಾಶಾಲೆಯಲ್ಲಿ ವಿವಿಧ ಕ್ಲಬ್‌ಗಳ ಹಾಗೂ ವಿದ್ಯಾರ್ಥಿ ಸಂಘದ ಚುನಾಯಿತ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ನೀಡುವ ಮೂಲಕ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು, ತಂತ್ರಜ್ಞಾನಗಳನ್ನು ಭವಿಷ್ಯದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ದುರ್ನಡತೆ, ದುರ್ವ್ಯಸನಗಳಿಗೆ ದಾರಿಯಾಗಬಾರದು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮತ್ತು ವ್ಯಕ್ತಿತ್ವ ವಿಕಸನಕ್ಕೆ ತಂತ್ರಜ್ಞಾನ ಬಳಸಿಕೊಳ್ಳಬೇಕು. ಮೊಬೈಲ್ ಫೋನ್ ಬಳಕೆ ಬಗ್ಗೆ ವಿದ್ಯಾರ್ಥಿಗಳು ಜಾಗೃತರಾಗಿರಬೇಕು. ವಿದ್ಯಾರ್ಥಿಗಳಿಗೆ ಕೌತುಕವೆನಿಸುವ ವಸ್ತುಗಳಲ್ಲಿ ಕೆಲವು ಕಿಡಿಗೇಡಿಗಳು ಡ್ರಗ್ಸ್ ಬಳಸಿ ಇಡೀ ಜನಾಂಗವನ್ನು ನಾಶ ಮಾಡುವ ಉದ್ದೇಶ ಹೊಂದಿರುವವರ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದರು.
ಪರೀಕ್ಷೆಗೆ ಅವಶ್ಯಕತೆ ಇರುವ ವಿಷಯಗಳು ಎಷ್ಟು ಮುಖ್ಯವೋ ಸಹಪಠ್ಯ ಚಟುವಟಿಕೆಗಳು ಅಷ್ಟೇ ಮುಖ್ಯ. ತಮ್ಮ ಜವಾಬ್ದಾರಿಗಳನ್ನು ಮತ್ತು ಕರ್ತವ್ಯಗಳನ್ನು ಚೈತನ್ಯ ಮತ್ತು ಉತ್ಸಾಹದಿಂದ ನಿಭಾಯಿಸಲು ಮಕ್ಕಳನ್ನು ಪ್ರೇರೇಪಿಸಿದರು.
ವಿಜಯ ವಿಠಲ ವಿದ್ಯಾ ಶಾಲೆಯ ಟ್ರಸ್ಟಿ ಶ್ರೀಕಾಂತ್ ದಾಸ್ ಮಾತನಾಡಿ, ಭವ್ಯ ಭಾರತ ನಿರ್ಮಾಣ ಮಾಡುವ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಬಹಳ ಮುಖ್ಯ ಎಂಬುದನ್ನು ಕಥೆಯ ಮೂಲಕ ತಿಳಿಸಿ, ವಿದ್ಯಾರ್ಥಿಗಳ ಯಶಸ್ವಿಗೆ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ತಿಳಿಸಿದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್.ವಾಸುದೇವ್ ಭಟ್, ಸಂಸ್ಥೆಯ ಟ್ರಸ್ಟ್‌ಗಳಾದ ಸಿ.ಎ.ವಿಶ್ವನಾಥ್, ಪ್ರಾಂಶುಪಾಲ ಎಸ್.ಎ.ವೀಣಾ, ಸತ್ಯ ಪ್ರಸಾದ್, ಶಿಕ್ಷಕ ವರ್ಗ ಮಕ್ಕಳು, ಪೋಷಕರು ಉಪಸ್ಥಿತರಿದ್ದರು.