Sunday, April 20, 2025
Google search engine

Homeಸ್ಥಳೀಯವಚನ ಸಾಹಿತ್ಯದಲ್ಲಿ ಹಡಪದ ಅಪ್ಪಣ್ಣ ನವರ ಕೊಡುಗೆ ಅಪಾರ

ವಚನ ಸಾಹಿತ್ಯದಲ್ಲಿ ಹಡಪದ ಅಪ್ಪಣ್ಣ ನವರ ಕೊಡುಗೆ ಅಪಾರ


ಚಾಮರಾಜನಗರ: ಹನ್ನೆರಡನೇ ಶತಮಾನವು ವಚನ ಸಾಹಿತ್ಯದಲ್ಲಿ ಕ್ರಾಂತಿ ಉಂಟು ಮಾಡಿದ ಯುಗವಾಗಿದ್ದು, ಈ ಸಂದರ್ಭದಲ್ಲಿ ಹಡಪದ ಅಪ್ಪಣ್ಣ ಅವರು ರಚಿಸಿದ ವಚನಗಳ ಸಾರ ಶ್ರೇಷ್ಠವಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಿಂದ ವಚನ ಸಾಹಿತ್ಯ ತನ್ನದೇ ಆದ ಶ್ರೇಷ್ಠತೆಯನ್ನ ಕಂಡುಕೊಂಡಿತು. ಹಡಪದ ಅಪ್ಪಣ ಅವರು ಬಸವಣ್ಣ ಅವರ ಆಪ್ತ ಕಾರ್ಯದರ್ಶಿಯಾಗಿ ಅನೇಕ ಉತ್ತಮ ವಚನಗಳನ್ನು ರಚಿಸಿದರು. ಅವರ ವಚನಗಳ ಸಾರ ಶ್ರೇಷ್ಠ ಎನಿಸಿವೆ ಎಂದರು. ವೃತ್ತಿಯಿಂದ ಯಾರೂ ಮೇಲಲ್ಲ ಅಥವಾ ಕೀಳಲ್ಲ. ಪ್ರತಿಯೊಬ್ಬರ ವೃತ್ತಿಗೂ ತನ್ನದೇ ಆದ ಘನತೆ ಇದೆ. ಹೀಗಾಗಿ ಪ್ರತೀ ವೃತ್ತಿಗೂ ಗೌರವ ನೀಡಬೇಕಿದೆ. ಯಾರು ಒಳ್ಳೆಯ ಕೆಲಸ ಮಾಡುತ್ತಾರೆಯೇ ಅವರಿಗೆ ಗೌರವ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಯವರು ತಿಳಿಸಿದರು. ವಿದ್ಯಾರ್ಥಿಗಳು ಹೆಚ್ಚಾಗಿ ಶಿಕ್ಷಣದತ್ತ ಗಮನಹರಿಸಬೇಕು. ವಚನ ಸಾಹಿತ್ಯದ ಬಗ್ಗೆಯೂ ಅರಿತುಕೊಂಡಾಗ ಉತ್ತಮ ವ್ಯಕ್ತಿಗಳಾಗಲು ಸಾಧ್ಯ. ಇತ್ತೀಚಿನ ದಿನಗಳು ತುಂಬಾ ಸ್ಪರ್ಧಾತ್ಮಕವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾದಾಗ ಉನ್ನತ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಗಮನಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಸಲಹೆ ಮಾಡಿದರು.
ಮುಖ್ಯ ಭಾಷಣಕಾರರಾಗಿದ್ದ ಕೊಳ್ಳೇಗಾಲ ನಿವೃತ್ತ ಶಿಕ್ಷಕರಾದ ಶಿವಣ್ಣ ಇಂದುವಾಡಿ ಅವರು ಮಾತನಾಡಿ 12ನೇ ಶತಮಾನದ ಜಗಜ್ಯೋತಿ ಬಸವಣ್ಣ, ಹಡಪದ ಅಪ್ಪಣ್ಣ ಅವರ ವಚನ ಸಾಹಿತ್ಯದ ಕೊಡುಗೆಯನ್ನು ಎಲ್ಲರೂ ಸ್ಮರಿಸಬೇಕು. ಈ ಶತಮಾನವು ಕೇವಲ ವಚನಯುವಾಗದೇ ಸುವರ್ಣಯುಗ ಪರಿಣಮಿಸಿತು. ಅಂದಿನ ವೃತ್ತಿ ಆಧಾರಿತವಾದ ಧರ್ಮ, ಜಾತಿಗಳ ಮಧ್ಯೆ ಮನುಷತ್ವದ ನೆಲೆಯಲ್ಲಿ ಚಿಂತಿಸುವಂತೆ ಮಾಡಿದರು ಎಂದರು. ಸಮ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ವಚನಗಳ ಮೂಲಕ ಹೋರಾಟವನ್ನು ಪ್ರಾರಂಭಿಸಿದರು. ಅನುಭವ ಮಂಟಪವನ್ನು ಸ್ಥಾಪಿಸಿ ಜ್ಞಾನ ದಾಸೋಹ, ಅಕ್ಷರ ದಾಸೋಹಕ್ಕೆ ಕಾರಣರಾದವರು ಜಗಜ್ಯೋತಿ ಬಸವಣ್ಣನವರು. ಹಡಪದ ಅಪ್ಪಣ್ಣ ಅವರು ಬಸವಣ್ಣನವರೊಂದಿಗೆ ಆಪ್ತರಾಗಿದ್ದರು. ಬಸವಣ್ಣ ಅವರ ರೀತಿಯಂತೆ ಹಡಪದ ಅಪ್ಪಣನವರು ಸಮಾಜದಲ್ಲಿರುವ ಅಸಮಾನತೆ ವಿರುದ್ದ ದನಿ ಎತ್ತಿದವರು. ವಚನ ಸಾಹಿತ್ಯದ ವಿಷಯದಲ್ಲಿ ವಿದ್ವತ್ತು, ಗಂಭೀರತೆ, ಗಾಢತೆಯನ್ನು ಹೊಂದಿದ್ದರು ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣವು ತುಂಬಾ ಅವಶ್ಯಕವಾಗಿದೆ. ಮಕ್ಕಳು ಚೆನ್ನಾಗಿ ಓದಿ ದೇಶದ ಉನ್ನತ ಸ್ಥಾನಗಳನ್ನು ಅಲಂಕರಿಸುವಂತಾಗಬೇಕು. ಶಿಕ್ಷಣದಿಂದ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಶಿಕ್ಷಣದಿಂದ ಜಾಗೃತ ಮನಸ್ಸುಗಳಾಗಬಹುದು ಎಂದು ಶಿವಣ್ಣ ಇಂದುವಾಡಿ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್,ಸಿ ಹಾಗೂ ಪಿ.ಯು.ಸಿ ಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮುದಾಯದ ಮುಖಂಡರಾದ ವೆಂಕಟರಾಜು, ಬಸವಣ್ಣ, ವಿಠ್ಠಲ್, ತಮ್ಮಯ್ಯ, ಮಹದೇವಪ್ಪ, ದೊಡ್ಡತಾಯಮ್ಮ, ಮಹದೇವಮ್ಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿದೇಶಕರಾದ ಗುರುಲಿಂಗಯ್ಯ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular