ಮಂಡ್ಯ: ಜಿಲ್ಲೆಯ ನಾನಾ ಭಾಗಗಳಿಂದ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಚಲುವರಾಯಸ್ವಾಮಿ ಅವರು ಹೇಳಿದರು.
ಸ್ಯಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ ನಿರ್ಮಿಸಿರುವ ವೇದಿಕೆಗಳ ನಿರ್ಮಾಣ ಕಾರ್ಯದ ಸಿದ್ಧತೆ ಪರಿಶೀಲನೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಂಖ್ಯೆಯಲ್ಲಿ ಕೆಎಸ್ ಆರ್ ಟಿಸಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ಮೂರು ದಿನ ೭ ತಾಲೂಕು ಕೇಂದ್ರಗಳಿಂದ ಸಮ್ಮೇಳನ ನಡೆಯುವ ಸ್ಥಳಕ್ಕೆ ೧೫ ವಿಶೇಷ ವಾಹನಗಳನ್ನು ಒಳಗೊಂಡಂತೆ ೧೦೫ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಮತ್ತು ಬೆಂಗಳೂರಿನಿಂದ ಪ್ರತಿ ೩೦ ನಿಮಿಷಕ್ಕೆ ಒಂದರಂತೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಮಂಡ್ಯ ನಗರದ ವಿವಿಧ ಸ್ಥಳಗಳಿಂದ ಸಮ್ಮೇಳನದ ಸ್ಥಳಕ್ಕೆ ಜನರನ್ನು ಕರೆತರಲು ೧೫ ವಾಹನಗಳ ಸಾರಿಗೆ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲಾಗಿದೆ. ಮೊದಲನೆಯದಾಗಿ ಮಂಡ್ಯ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ, ನಂದಾ ಸರ್ಕಲ್, ಫ್ಯಾಕ್ಟರಿ ಸರ್ಕಲ್, ಸ್ವರ್ಣಸಂದ್ರ, ಮಾಂಡವ್ಯ ಕಾಲೇಜ್, ಉಮ್ಮಡಹಳ್ಳಿ ಗೇಟ್, ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ.