ಯಳಂದೂರು: ಮದ್ದೂರು ಗ್ರಾಮದ ಪರಿಶಿಷ್ಟ ಜಾತಿಯ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ನಡುವೆ ಇರುವ ಸುವರ್ಣಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಬೇಕು, ಇಲ್ಲಿ ಎದೆ ಮಟ್ಟದ ನೀರಿನಲ್ಲೇ ಹೆಣವನ್ನು ಹೊರಬೇಕಾದ ಸ್ಥಿತಿ ಇದೆ ಎಂದು ಈಚೆಗೆ ಗ್ರಾಮಸ್ಥರು ಪ್ರತಿಭಟಿಸಿದ್ದರು.
ಈ ಹಿನ್ನೆಲೆಯಲ್ಲಿ ಮಾಜಿ ಶಾಸಕರಾದ ಎನ್.ಮಹೇಶ್ ಹಾಗೂ ಎಸ್. ಬಾಲರಾಜು ಉಪವಿಭಾಗಾಧಿಕಾರಿ ಮಹೇಶ್ ತಹಶೀಲ್ದಾರ್ ಜಯಪ್ರಕಾಶ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಸಿ. ತಹಶೀಲ್ದಾರ್ ಭೇಟಿ: ಉಪವಿಭಾಗಾಧಿಕಾರಿ ಮಹೇಶ್ ಹಾಗೂ ಜಯಪ್ರಕಾಶ್ ನೇತೃತ್ವದ ಅಧಿಕಾರಿಗಳ ತಂಡವೂ ಸಹ ಸ್ಥಳ ಪರಿಶೀಲನೆ ನಡೆಸಿದರು. ಮದ್ದೂರು ಗ್ರಾಮದ ಪರಿಶಿಷ್ಟ ಜಾತಿಯವರಿಗೆ ಈಗಾಗಲೇ ಸ್ಮಶಾನಕ್ಕೆ ಜಾಗವನ್ನು ನೀಡಲಾಗಿದೆ. ಇಲ್ಲಿರುವ ಸ್ಮಶಾನಕ್ಕೆ ತೆರಳಲು ಆಲ್ಕರೆ ಅಗ್ರಹಾರ ಗ್ರಾಮದಿಂದ ಹೋದರೆ ೨ ಕಿ.ಮಿ. ದೂರವಾಗುತ್ತದೆ. ಗ್ರಾಮಸ್ಥರು ಇಲ್ಲಿಂದ ನೇರವಾಗಿ ಸೇತುವೆ ನಿರ್ಮಿಸಿದರೆ ಅರ್ಧ ಕಿ.ಮಿ. ಸಾಕು ಇದನ್ನು ನಿರ್ಮಿಸುವಂತೆ ನಮಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದು ನಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ ಇದಕ್ಕೆ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಆರ್‌ಡಿಪಿಆರ್, ಪಿಆರ್‌ಇಡಿ ವ್ಯಾಪ್ತಿಗೆ ಇದು ಒಳಪಡುವುದರಿಂದ ಅವರ ಗಮನಕ್ಕೆ ಈ ವಿಷಯ ತರಲಾಗುವುದು ಎಂದು ತಹಶೀಲ್ದಾರ್ ಜಯಪ್ರಕಾಶ್ ಮಾಹಿತಿ ನೀಡಿದರು.