ಮಂಗಳೂರು (ದಕ್ಷಿಣ ಕನ್ನಡ): ಕ್ರಿಸ್ಮಸ್ ನಮ್ಮ ಮಾನವೀಯತೆಯ ಅತ್ಯುನ್ನತ ಘನತೆಯನ್ನು ಅರಿಯಲು ಒಂದು ಆಹ್ವಾನ. ಪ್ರೀತಿ ಮತ್ತು ಇತರರನ್ನು ಅರ್ಥಮಾಡಿಕೊಳ್ಳಲು ನಮಗಿರುವ ಎಲ್ಲಾ ಅಡೆತಡೆಗಳ ಗೋಡೆಗಳನ್ನು ಮೀರಬಲ್ಲುದು ಎಂಬ ಸತ್ಯವನ್ನು ಈ ಹಬ್ಬ ಜ್ಞಾಪಿಸುತ್ತದೆ. ಹೀಗಾಗಿ ಈ ಕ್ರಿಸ್ಮಸ್ ಸಮಯದಲ್ಲಿ ನಾವು ಮಾನವೀಯತೆಯನ್ನು ಎತ್ತಿ ಹಿಡಿಯೋಣ ಎಂದು ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನ ಸಂದೇಶ ನೀಡಿದ್ದಾರೆ.
ಅವರು ಮಂಗಳೂರು ನಗರದ ಕೊಡಿಯಾಲ್ ಬೈಲ್ ನ ಬಿಷಪ್ ಹೌಸ್ ನಲ್ಲಿ ಕರೆದ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಪ್ರತೀ ವರ್ಷ ಕ್ರಿಸ್ಮಸ್ ನಮಗೆ ಹೊಸ ಸಂದೇಶವನ್ನು ತರುತ್ತದೆ. ಯೇಸು ಕ್ರಿಸ್ತರು ನಮ್ಮ ಹೃದಯಗಳಲ್ಲಿ ಶಾಂತಿ ಹಾಗೂ ಭರವಸೆಯನ್ನು ತರುತ್ತಾರೆ. ಆಯಾಸಗೊಂಡ ಈ ಜಗತ್ತಿಗೆ ಯೇಸು, ಅಚ್ಚರಿಯ ತಾಜಾತನವನ್ನು ನೀಡುವ ಕಾರಂಜಿ ಇದ್ದಂತೆ. ಕ್ರಿಸ್ಮಸ್ ದೇವರು ಮತ್ತು ಮನುಷ್ಯರ ನಡುವೆ, ಅಂತೆಯೇ ಮನುಷ್ಯ-ಮನುಷ್ಯರ ನಡುವಿನ ಬದುಕಿನ ಸಂಬಂಧಗಳನ್ನು ಸೂಚಿಸುವ ಆಚರಣೆಯಾಗಿದೆ. ದೇವಪುತ್ರನು ಮಾನವನಾಗಿದ್ದಾನೆ ಎಂಬುದೇ ನಮ್ಮ ಸಂತೋಷಕ್ಕೆ ಕಾರಣ ದೇವರು ನಮ್ಮೊಡನೆ ಇದ್ದಾರೆ ಎಂಬ ಭರವಸೆ ನೀಡುವುದಕ್ಕಾಗಿಯೇ ಅವರು ನಮ್ಮ ನಡುವೆ ಇಳಿದು ಬಂದಿದ್ದಾರೆ ಎಂದವರು ಹೇಳಿದರು.