ಮೈಸೂರು : ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ಜಾಮೀನಿನ ಮೇಲೆ ಬಿಡುಗಡೆಯಾಗಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ನಟ ದರ್ಶನ್, ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ.
ಸರಸ್ವತಿಪುರಂನಲ್ಲಿರುವ ಕಾಮಾಕ್ಷಿ ಆಸ್ಪತ್ರೆಗೆ ಭೇಟಿ ನೀಡಿದ ದರ್ಶನ್, ವೈದ್ಯರನ್ನು ಭೇಟಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್‌ಗೆ ಆಸ್ಪತ್ರೆಯ ವೈದ್ಯರಾದ ಡಾ.ಅಜಯ್ ಹೆಗ್ಡೆ ಅವರು ಆರೋಗ್ಯ ತಪಾಸಣೆಯೊಂದಿಗೆ ಎಕ್ಸ್ ರೇ ತೆಗೆದು ಪರಿಶೀಲನೆ ನಡೆಸಿದ್ದು, ಅಗತ್ಯ ಚಿಕಿತ್ಸೆಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ೨೦ ನಿಮಿಷಗಳ ಆಸ್ಪತ್ರೆಯಲ್ಲಿ ದರ್ಶನ್ ಇದ್ದು, ಬಳಿಕ ತೆರಳಿದ್ದಾರೆ. ಈ ವೇಳೆ ನಟ ಧನ್ವೀರ್ ಕೂಡ ಇದ್ದರು.
ಆರೋಗ್ಯ ತಪಾಸಣೆ ಬಳಿಕ ದರ್ಶನ್ ತಿ.ನರಸೀಪುರ ರಸ್ತೆಯಲ್ಲಿರುವ ಫಾರಂ ಹೌಸ್‌ಗೆ ತೆರಳಿದರು. ಆಸ್ಪತ್ರೆಗೆ ದರ್ಶನ್ ಬರಲಿದ್ದಾರೆ ಎಂದು ಬೆಳಗ್ಗಿನಿಂದಲೇ ಆಸ್ಪತ್ರೆ ಮುಂದೆ ದರ್ಶನ್ ಅಭಿಮಾನಿಗಳು ಕಾದು ಕುಳಿತರು. ಅವರು ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಡಿ ಬಾಸ್, ಡಿ ಬಾಸ್ ಎಂದು ಜೈಕಾರ ಕೂಗಿದರು. ವಾಪಸ್ ತೆರಳುವಾಗಲೂ ನೂಕುನುಗ್ಗಲು ಉಂಟಾಯಿತು. ಸದ್ಯ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ದರ್ಶನ್ ಅವರಿಗೆ ಬೆಂಗಳೂರಿನ ಸತ್ರ ನ್ಯಾಯಾಲಯ ಡಿ.೨೦ರಿಂದ ೨೦೨೫ರ ಜನವರಿ ೫ರವರೆಗೆ ಮೈಸೂರಿಗೆ ತೆರಳಲು ಗುರುವಾರ ಅವಕಾಶ ನೀಡಿದೆ.