ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯ ವ್ಯಾಪ್ತಿಯ ಮುದಗನೂರಿನ ತೋಟದಲ್ಲಿ ಬಚ್ಚಿಟ್ಟಿದ್ದ ತೇಗದ ತುಂಡೊಂದನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು, ತೋಟದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಹೋಬಳಿಯ ಮುದಗನೂರಿನ ಗಿರೀಶ್ ಅವರ ತೋಟದಲ್ಲಿ ತೇಗದ ತುಂಡು ಪತ್ತೆಯಾಗಿದೆ.
ಖಚಿತ ಮಾಹಿತಿ ಮೇರೆಗೆ ಎಸ್‌ಟಿಪಿಎಫ್ ತಂಡ ಬುಧವಾರ ತೋಟದ ಮೇಲೆ ದಾಳಿ ನಡೆಸಿ ತೇಗದ ತುಂಡನ್ನು ಪತ್ತೆ ಹಚ್ಚಿದರು. ಬಳಿಕ ಅವರಿಂದ ಮಾಹಿತಿ ಪಡೆದ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮಣ್ಣಿನಲ್ಲಿ ಬಚ್ಚಿಟ್ಟಿದ್ದ ಒಂದು ಮೀ.ದಪ್ಪ ಹಾಗೂ ೨.೩೦ ಮೀ. ಉದ್ದದ ತೇಗದ ತುಂಡನ್ನು ವಶಪಡಿಸಿಕೊಂಡರು.
`ಆರೋಪಿ ನಾಪತ್ತೆಯಾಗಿದ್ದು, ಪತ್ತೆಗೆ ಕ್ರಮವಹಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಮಾಹಿತಿಯೂ ದೊರೆತಿದ್ದು, ತನಿಖಾ ಹಂತದಲ್ಲಿದೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಆರ್‌ಎಫ್‌ಒ ನಂದಕುಮಾರ್ ತಿಳಿಸಿದ್ದಾರೆ.