ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಮಾಡಿರೋ ಆರೋಪಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇಂದು ಮಂಗಳೂರಿನ ಖಾಸಗಿ ಹೊಟೇಲ್ ಹಾಲ್ ನಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕಬಡ್ಡಿ ಅಸೋಸಿಯೇಷನ್‌ನಲ್ಲಿ ನಡೆದ ಅವ್ಯವಹಾರ ಹಾಗೂ ಕಬಡ್ಡಿ ಆಟಗಾರರಿಗೆ ಆಗುತ್ತಿದ್ದ ಅನ್ಯಾಯಗಳನ್ನು ದಾಖಲೆ ಸಮೇತ ಮಾಧ್ಯಮದ ಮುಂದೆ ಇಟ್ಟಿದ್ದಾರೆ. ತಾನು ರಾಜ್ಯದ ಕಬಡ್ಡಿ ಆಟಗಾರರ ಹಿತಕ್ಕಾಗಿ ಸದನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ್ದೆ ಎಂದು ಹೇಳಿದ್ದಾರೆ. 2012 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ ಜಿಲ್ಲೆಯ ಆಟಗಾರರಿಗೆ ಏನು ಮಾಡಿದ್ದಾರೆ ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.
2009 ರಲ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದ ರಾಕೇಶ್ ಮಲ್ಲಿ ಸಂಸ್ಥೆಯ ಸದಸ್ಯತ್ವವನ್ನು 2012 ರಲ್ಲಿ ಪಡೆದುಕೊಂಡು ಅಧ್ಯಕ್ಷರಾಗಿದ್ದಾರೆ. ಅದಾದ ಬಳಿಕ ನಿರಂತರ 2024 ರ ತನಕವೂ ಅಧಿಕಾರದಲ್ಲಿದ್ದು, ಎಷ್ಟು ಆಟಗಾರರನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಿದ್ದಾರೆ ಎಂಬ ಲೆಕ್ಕ ನೀಡಲಿ ಎಂದು ಸವಾಲು ಹಾಕಿದ್ದಾರೆ.