ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ನಂತೂರ್ ಜಂಕ್ಷನ್‌ನಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಅತೀ ಅಗತ್ಯವಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಕಾಮಗಾರಿ ಆದೇಶವನ್ನು ಇನ್ನಷ್ಟೇ ನೀಡಬೇಕಾಗಿದೆ. ಪರ್ಯಾಯ ವ್ಯವಸ್ಥೆಯ ಬಳಿಕವೇ ಫ್ಲೈ ಓವರ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಒತ್ತಾಯಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕಚೇರಿ ಕಟ್ಟಡದಲ್ಲಿರುವ ನೂತನ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎನ್‌ಎಚ್‌ಎಐ ಅಧಿಕಾರಿಗಳ ಜತೆಗೆ ಈ ಬಗ್ಗೆ ಈಗಾಗಲೇ ಮಾತನಾಡಿರುವುದಾಗಿ ತಿಳಿಸಿದರು. 69 ಕೋಟಿ ರೂ.ಗಳ ಯೋಜನೆಗೆ ಟೆಂಡರ್ ಆಗಿದೆ. ಟೆಂಡರ್ ನಿಯಮದ ಪ್ರಕಾರ ಎರಡು ವರ್ಷಗಳ ಅವಧಿಗೆ ಈ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ವಾಹನ ದಟ್ಟಣೆಯ ಪ್ರದೇಶವಾಗಿರುವ ಈ ಪ್ರದೇಶದಲ್ಲಿ ಅಗತ್ಯ ಕಾಂಕ್ರೀಟ್ ಸರ್ವಿಸ್ ರಸ್ತೆಗಳೊಂದಿಗೆ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಬೇಕು.
ಇಲ್ಲವಾದಲ್ಲಿ ಈಗಾಗಲೇ ವಾಹನ ದಟ್ಟಣೆಯಿಂದ ಕೂಡಿರುವ ಈ ಪ್ರದೇಶದಲ್ಲಿ ಮತ್ತಷ್ಟು ತೊಂದರೆಗಳನ್ನು ಸಾರ್ವಜನಿಕರು ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾಮಗಾರಿ ಮಲ್ಲಿಕಟ್ಟೆರಸ್ತೆಯಿಂದ ಬಿಕರ್ನಕಟ್ಟೆ ರಸ್ತೆಯಲ್ಲಿ ಓವರ್ ಪಾಸ್ ಸೇತುವೆ ಸಾಗಲಿದ್ದು, ರಾ.ಹೆದ್ದಾರಿ ಕೆಳಭಾಗದಲ್ಲಿ ಸಾಗಿ ಹೋಗಲಿದೆ ಎಂದು ಹೇಳಲಾಗಿದೆ. ಆದರೆ ಇಲ್ಲಿ ಯಾವ ರೀತಿಯಲ್ಲಿ ಕಾಮಗಾರಿ ಸಾಗಲಿದೆ ಎಂಬ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರಿಗೆ ಮಾಹಿತಿ ಇಲ್ಲದಿರುವುದು ಇತ್ತೀಚಿನ ಸಭೆಯಲ್ಲಿ ತಿಳಿದಿದ್ದು, ಈ ಬಗ್ಗೆ ಎನ್‌ಎಚ್‌ಎಐನಿಂದ ಸಾರ್ವಜನಿಕ ಅಹವಾಲು ಸಭೆಯನ್ನು ಆಯೋಜಿಸಬೇಕು ಎಂದು ಅವರು ಹೇಳಿದರು.