ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ನಿರತರಾಗಿರುವ ಜನರ ಅನುಕೂಲಕ್ಕೆ ಡಿ.31ರಂದು ಮಧ್ಯರಾತ್ರಿ 2 ಗಂಟೆಗೆ ಕೊನೆಯ ಮೆಟ್ರೋ ತನ್ನ ಟರ್ಮಿನಲ್ ನಿಲ್ದಾಣದಿಂದ ಹೊರಡಲಿದೆ. ಮಧ್ಯರಾತ್ರಿ 2.40ಕ್ಕೆ ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್) ದಿಂದ ರೈಲುಗಳು ತಮ್ಮ ಅಂತಿಮ ನಿಲ್ದಾಣಕ್ಕೆ ಸಂಚರಿಸಲಿದೆ.
ಸಾಮಾನ್ಯ ದಿನಗಳಲ್ಲಿ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗಗಳಲ್ಲಿ ಪ್ರತಿ ದಿನ ರಾತ್ರಿ 11.30ಕ್ಕೆ ಕೊನೆಯ ರೈಲು ಸಂಚರಿಸುತ್ತಿದ್ದು, ಹೊಸ ವರ್ಷ ಪ್ರಯುಕ್ತ ಡಿ.31ರಂದು ಕೊನೆಯ ರೈಲು ಸೇವೆ ರಾತ್ರಿ 2.40ರ ತನಕ ಇರಲಿದೆ. ಈ ಸಂದರ್ಭದಲ್ಲಿ ಪ್ರತಿ 10 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಆದರೆ, ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣ ರಾತ್ರಿ 11 ಗಂಟೆಗೆ ಬಂದ್ ಆಗಲಿದ್ದು, ಈ ಅವಧಿಯಲ್ಲಿ ಪಕ್ಕದ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್‌ಗೆ ತೆರಳಿ ಮೆಟ್ರೋ ಸಂಚಾರ ಮಾಡಬಹುದಾಗಿದೆ.
ನೇರಳೆ ಮಾರ್ಗದ ವೈಟ್‌ಫೀಲ್ಡ್ ಮತ್ತು ಚಲ್ಲಘಟ್ಟ ನಿಲ್ದಾಣ ಹಾಗೂ ಹಸಿರು ಮಾರ್ಗದ ಮಾದಾವರ ಮತ್ತು ರೇಷ್ಮೆ ಸಂಸ್ಥೆಯಿಂದ ಕೊನೆಯ ರೈಲು ಮಧ್ಯರಾತ್ರಿ 2 ಗಂಟೆಗೆ ಹೊರಡಲಿದೆ. ಈ ರೈಲುಗಳು 2.40ಕ್ಕೆ ಮೆಜೆಸ್ಟಿಕ್ ನಿಂದ ತಮ್ಮ ಕೊನೆಯ ನಿಲ್ದಾಣಕ್ಕೆ ಪ್ರಯಾಣಿಸಲಿದೆ.
ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಪ್ರಯಾಣಿಸುವವರಿಗೆ 50 ರೂ. ಮೊತ್ತದ ಕಾಗದದ ಟಿಕೆಟ್ ವಿತರಿಸಲಾಗುವುದು. ಕಾಗದದ ಟಿಕೆಟ್‌ಗಳನ್ನು ಅಂದು ಮುಂಚಿತವಾಗಿಯೇ ಪಡೆಯಬೇಕು. ಈ ಕಾಗದದ ಟಿಕೆಟ್ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಡಿ.31ರ ಬೆಳಗ್ಗೆ 8 ಗಂಟೆಯಿಂದ ಮುಂಗಡವಾಗಿ ಖರೀದಿಸಲು ಲಭ್ಯವಿರುತ್ತದೆ. ಇನ್ನು ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಎಂದಿನಂತೆ ಮಾನ್ಯವಾಗಿರಲಿದೆ ಎಂದು ಮೆಟ್ರೋ ನಿಗಮ ಸ್ಪಷ್ಟಪಡಿಸಿದೆ.