Saturday, April 19, 2025
Google search engine

Homeರಾಜ್ಯಪ್ರವಾಸಿ ನಿರ್ಬಂಧ ತೆರವು: ಹೊಸ ವರ್ಷಕ್ಕೆ ಜೋಗ ಜಲಪಾತ ವೀಕ್ಷಣೆಗೆ ಮುಕ್ತ

ಪ್ರವಾಸಿ ನಿರ್ಬಂಧ ತೆರವು: ಹೊಸ ವರ್ಷಕ್ಕೆ ಜೋಗ ಜಲಪಾತ ವೀಕ್ಷಣೆಗೆ ಮುಕ್ತ

ಶಿವಮೊಗ್ಗ: ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ದ್ವಾರವನ್ನು ಹೊರತುಪಡಿಸಿ ಉಳಿದೆಲ್ಲ ಪರ್ಯಾಯ ಸ್ಥಳಗಳಿಂದ ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.

ಪ್ರವಾಸೋದ್ಯಮ ಮೂಲಸೌಕರ್ಯಗಳ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿರುವ ಕಾರಣ ಜನವರಿ 1 ರಿಂದ ಮಾರ್ಚ್ 15 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ, ವ್ಯೂ ಪಾಯಿಂಟ್, ಯಾತ್ರಿ ನಿವಾಸ, ರಾಣಿ ಫಾಲ್ಸ್, ಮುಂಬೈ ಬಂಗಲೆ ಮುಂತಾದ ಸ್ಥಳಗಳಿಂದ ಪ್ರವಾಸಿಗರು ಜಲಪಾತಗಳನ್ನು ವೀಕ್ಷಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿತ್ತು. ಆದರೆ, ಈ ವರ್ಷ ಪ್ರವೇಶ ನಿಷೇಧಿಸುವ ಮುನ್ನವೇ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಜೋಗ ವೀಕ್ಷಣೆಯ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಧರ್ಮಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೋಗದಲ್ಲಿ ಮುಖ್ಯದ್ವಾರ ನಿರ್ಮಾಣ ಮತ್ತು ಇತರ ಮೂಲ ಸೌಕರ್ಯವನ್ನು ಕಲ್ಪಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಸುಮಾರು 185 ಕೋಟಿ ರೂ.ಗಳಲ್ಲಿ ಜೋಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಜಲಪಾತ ವೀಕ್ಷಣಾ ಗೋಪುರ, ರೋಪ್ ವೇ, ರೈನ್ ಡ್ಯಾನ್ಸ್, ಗಾರ್ಡನ್, ವಾಣಿಜ್ಯ ಮಳಿಗೆಗಳು, ಉದ್ಯಾನವನ, ಪ್ರವಾಸಿ ಲಾಡ್ಜ್ ಕಾಮಗಾರಿ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ.

ಆ ಹಿನ್ನೆಲೆಯಲ್ಲಿ ಈ ಮೊದಲು ಜೋಗಕ್ಕೆ ಪ್ರವಾಸಿಗಳ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು.

RELATED ARTICLES
- Advertisment -
Google search engine

Most Popular