ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ದಕ್ಷಿಣ ಭಾರತದಲ್ಲಿಯೇ ಹೆಸರು ವಾಸಿಯಾಗಿರುವ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯ ಬಾರಿ ಜಾನುವಾರು ಜಾತ್ರೆಗೆ ದಿನಗಣನೆ ಆರಂಭವಾಗಿದ್ದು, ಜಾತ್ರೆಯಲ್ಲಿ ಭಾಗವಹಿಸಲು ರೈತರು ಜಾತ್ರಾಮಾಳದಲ್ಲಿ ದವಣಿ ಮಾಡುತ್ತಿದ್ದು 3 ರಿಂದ 4 ಸಾವಿರ ಸಾವಿರಕ್ಕು ಅಧಿಕ ರಾಸುಗಳು ಭಾಗವಹಿಸುವ ನಿರೀಕ್ಷೆ ಇದೆ.ಈ ಬಾರಿ ಜನವರಿ 5 ರಿಂದ ಆರಂಭಗೊಳ್ಳುವ ಜಾತ್ರೆಯಲ್ಲಿ ಭಾಗವಹಿಸುವ ರೈತರು ಜಾತ್ರಾಮಾಳಕ್ಕೆ ಆಗಮಿಸಿ ಜಾನುವಾರುಗಳನ್ನು ಇಳಿಜಾರಿನಲ್ಲಿ ನಿಲ್ಲಿಸಲು ಅನುಕೂಲವಾಗುವಂತೆ ಕಟ್ಟಲು ದವಣಿಗಳನ್ನು ಮಾಡುವ ಕಾರ್ಯದಲ್ಲಿ ನಿರತರಾಗಿದ್ದು ಭರ್ಜರಿ ವ್ಯಾಪಾರ ವಹಿವಾಟು ನಿರೀಕ್ಷೆ ಮಾಡಲಾಗಿದೆ.
ಜಾತ್ರೆಗೆ ಬರುವ ರಾಸುಗಳನ್ನು ಕಟ್ಟಲು ಪ್ರತ್ಯೇಕ ಜಾಗ ಇಲ್ಲದ ಕಾರಣ ಚುಂಚನಕಟ್ಟೆಯ ಸುತ್ತಮುತ್ತ ಇರುವ ಜಾಗದಲ್ಲಿ ರೈತರ ಜಮೀನನ್ನು ಗದ್ದೆಗೆ 2ರಿಂದ 8 ಸಾವಿರ ರೂ.ಗಳನ್ನು ನೀಡಿ ಅಲ್ಲಿ ರಾಸು ಗಳನ್ನು ಕಟ್ಟಲು ಗದ್ದೆ ಸ್ವಚ್ಛಗೊಳಿಸಿ ದವಣಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ತಮ್ಮ ರಾಸುಗಳ ವೈಭೋಗ ತೋರಲು ಬೃಹತ್ ಚಪ್ಪರ ಹಾಕಲು ತಯಾರಿ ನಡೆಸುತ್ತಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ ರೈತರು ಸಾಕಿರುವ ವಿವಿಧ ತಳಿಯ ಜಾನುವಾರುಗಳು ಭಾಗವಹಿಸಲಿವೆ. ಇದಕ್ಕಾಗಿ ರೈತರು ಸಿದ್ಧತೆ ಆರಂಭಿಸಿದ್ದು, ಜಾತ್ರೆ ಇನ್ನು 5 ದಿನದಲ್ಲಿ ಭರ್ಜರಿಯಾಗಿ ಆರಂಭ ಗೊಳ್ಳಲಿದೆ. ಇದಕ್ಕಾಗಿ ರಾಸುಗಳ ವ್ಯಾಪಾರಿಗಳು ಎದುರು ನೋಡುತ್ತಿದ್ದು ಅದರಿಂದ ಕೋಟ್ಯಂತರ ರೂ.ಗಳ ವ್ಯಾಪಾರ ನಡೆಯುವುದು ನಿಶ್ಚಿತವಾಗಿದೆ.
ಈಗಾಗಲೇ ಶಾಸಕ ಡಿ.ರವಿಶಂಕರ್ ಅವರು ಜಾತ್ರೆಯ ಕುರಿತು ಪೂರ್ವ ಭಾವಿ ಸಭೆ ನಡೆಸಿ ಜಾತ್ರೆಗೆ ಅಗತ್ಯ ಮೂಲ ಸೌಲಭ್ಯವನ್ನು ಕಲ್ಪಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜನವರಿ 5ರ ಮೊದಲೇ ಜಾತ್ರೆಗೆ ರಾಸುಗಳನ್ನು ಕರೆತರುವವರಿಗೆ ತಾಲೂಕು ಆಡಳಿತದಿಂದ ಯಾವುದೇ ಸವಲತ್ತನ್ನು ಒದಗಿಸುವುದಿಲ್ಲ ಎಂದು ಹೇಳಿರುವುದರಿಂದ ರೈತರು ಜನವರಿ 5 ರಿಂದಲೇ ಜಾತ್ರೆಗೆ ಆಗಮಿಸಬೇಕಾಗಿದೆ.
ಅಧಿಕಾರಿಗಳ ಅಸಡ್ಡೆ : ಜಾತ್ರೆಗೆ ಇನ್ನು ಕೇವಲ 5 ದಿನಗಳು ಬಾಕಿ ಇದ್ದರೂ ತಾಲೂಕು ಆಡಳಿತ ಮಾತ್ರ ಇಲ್ಲಿ ಸ್ವಚ್ಚತೆ, ಅಗತ್ಯವಿದ್ದ ಕಡೆ ಕುಡಿಯುವ ನೀರಿನ ನಲ್ಲಿಗಳನ್ನು ಅಳವಡಿಸುವುದು, ಆರೋಗ್ಯ ಇಲಾಖೆ ಯಿಂದ ತಾತ್ಕಾಲಿಕ ಆರೋಗ್ಯ ಚಿಕಿತ್ಸಾ ಕೇಂದ್ರ, ಪಶು ಇಲಾಖೆ ವತಿಯಿಂದ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲು ಮುಂದಾಗಿಲ್ಲ. ಅಲ್ಲದೆ ಪೊಲೀಸ್ ಇಲಾಖೆ ವತಿಯಿಂದ ಭದ್ರತೆಯ ಪರಿಶೀಲನೆ ನಡೆದಿಲ್ಲ. ಈ ಜಾತ್ರೆಯ ಬಗ್ಗೆ ಅಧಿಕಾರಿ ವರ್ಗದವರು ಆಸಡ್ಡೆ ವಹಿಸಿರುವುದು ಜಾತ್ರಾಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತ ಗಮನ ಹರಿಸಬೇಕು : ದಕ್ಷಿಣ ಭಾರತದಲ್ಲಿಯೇ ಹೆಸರು ವಾಸಿಯಾಗಿರುವ ಈ ಜಾತ್ರೆಯ ಬಗ್ಗೆ ಅಧಿಕಾರಿಗಳ ಅಸಡ್ಡೆಯಿಂದ ಜಾತ್ರೆ ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದ್ದರೂ ರೈತರು ಮಾತ್ರ ಜಾತ್ರೆಯಿಂದ ಹಿಂದೆ ಉಳಿಯದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಸಕ್ತಿ ತೋರುತ್ತಿರುವುದು ಕಂಡು ಬಂದಿದೆ. ಜಿಲ್ಲಾಡಳಿತ ತನ್ನ ಅಧಿಕಾರವನ್ನು ಚಲಾಯಿಸಿ ಜಾತ್ರೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಜಾತ್ರೆಯ ವೈಭವವನ್ನು ಕಣ್ಣು ತುಂಬಿಕೊಳ್ಳುವಂತೆ ಮಾಡಬೇಕಿದೆ.