ಬೆಂಗಳೂರು: ಜಮಾತ್ ಉಲ್ ಉಗ್ರ ಸಂಘಟನೆಯ ಕೃತ್ಯಗಳಿಗೆ ಭಾರತದಲ್ಲಿ ಉತ್ತೇಜನ ನೀಡಿದ ಪ್ರಕರಣಗಳಲ್ಲಿ ಬಾಂಗ್ಲಾದೇಶದ ಪ್ರಜೆ ಜಾಹಿದುಲ್ ಇಸ್ಲಾಂ ಅಲಿಯಾಸ್ ಕೌಸರ್ ಎಂಬಾತನಿಗೆ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಡಕಾಯಿತಿ, ಪಿತೂರಿ, ಭಯೋತ್ಪಾದನೆಗೆ ನಿಧಿ ಸಂಗ್ರಹ ಮತ್ತು ಮದ್ದುಗುಂಡುಗಳ ಖರೀದಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಹಿದುಲ್‌ಗೆ 57,000 ರೂ. ದಂಡ ವಿಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣಗಳಲ್ಲಿ ಒಟ್ಟು 11 ಆರೋಪಿಗಳಿಗೆ ಶಿಕ್ಷೆಯಾದಂತಾಗಿದೆ.
ಬುರ್ದ್ವಾನ್ ಸ್ಫೋಟ ಪ್ರಕರಣದ ತನಿಖೆಯ ಸಮಯದಲ್ಲಿ ಏಜೆನ್ಸಿಯ ಕೋಲ್ಕತ್ತಾ ಶಾಖೆಯ ಕಚೇರಿಯಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ 2019 ರ ಜೂನ್ನಲ್ಲಿ ಬೆಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು.
ಎನ್‌ಐಎ ತನಿಖೆಯಲ್ಲಿ ದೊರೆತ ಮಾಹಿತಿಯ ಪ್ರಕಾರ, 2005ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸರ ವಶದಲ್ಲಿದ್ದ ಜಾಹಿದುಲ್, 2014ರಲ್ಲಿ ಜೆಎಂಬಿ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜೊತೆಗೆ ಪರಾರಿಯಾಗಿ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ. ಅದೇ ಸಂದರ್ಭದಲ್ಲಿ 2014 ರ ಬುರ್ದ್ವಾನ್ ಸ್ಫೋಟ ಪ್ರಕರಣದಲ್ಲಿ ಶಾಮೀಲಾಗಿದ್ದ.
ಬುರ್ದ್ವಾನ್ ಸ್ಫೋಟದ ನಂತರ, ಜಾಹಿದುಲ್ ಮತ್ತು ಸಹಚರರು ಬೆಂಗಳೂರಿಗೆ ಪರಾರಿಯಾಗಿದ್ದರು. ಬೆಂಗಳೂರಿನಲ್ಲಿದ್ದುಕೊಂಡೇ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಮುಸ್ಲಿಂ ಯುವಕರಿಗೆ ಭಾರತ-ವಿರೋಧಿ ಚಟುವಟಿಕೆಗಳನ್ನು ನಡೆಸುವಂತೆ ಕುಮ್ಮಕ್ಕು ನೀಡಿದ್ದರು.