ಇಂದು ರಾತ್ರಿ ಚಾ.ಬೆಟ್ಟಕ್ಕೆ ಪ್ರವೇಶ ನಿರ್ಬಂಧ
ಮೈಸೂರು : ೨೦೨೫ರ ಹೊಸ ವರ್ಷಾಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಭದ್ರತೆ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಡಿ.೩೧ರ ರಾತ್ರಿ ೭ ಗಂಟೆಯಿಂದ ಜ.೧ರ ಬುಧವಾರ ಮುಂಜಾನೆವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಚಾಮುಂಡಿ ಬೆಟ್ಟದ ನಿವಾಸಿಗಳಿಗೆ ಇದು ಅನ್ವಯವಾಗುವುದಿಲ್ಲ. ಬೆಟ್ಟಕ್ಕೆ ತೆರಳಿದವರು ರಾತ್ರಿ ೯ ಗಂಟೆಯೊಳಗೆ ಬೆಟ್ಟದಿಂದ ವಾಪಾಸ್ ಬರಲು ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ನಗರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದ್ದು, ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಮೈಸೂರು ನಗರದಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒಳಗೊಂಡ ಎಂಟು ಚಾಮುಂಡಿ ಪಡೆ ( ಸುರಕ್ಷತಾ ಪಿಂಕ್ ಗರುಡಾ ) ರಚಿಸಲಾಗಿದೆ. ಹೊಸ ವರ್ಷಾಚರಣೆ ನೆಪದಲ್ಲಿ ಅಸಭ್ಯ ವರ್ತನೆಯನ್ನು ಯಾರೂ ಮಾಡಬಾರದು. ಈ ಸಂಬಂಧ ವಿಶೇಷ ಕಾರ್ಯಪಡೆ ತಂಡ ರಚನೆ ಮಾಡಲಾಗಿದೆ. ನಗರದ ಪ್ರಮುಖ ಸ್ಥಳಗಳಲ್ಲಿ ಶ್ವಾನದಳ ಮತ್ತು ವಿಧ್ವಂಸಕ ಕೃತ್ಯ ತಡೆಗಾಗಿ ರಚನೆ ಮಾಡಲಾಗಿದೆ. ನಗರದಲ್ಲಿರುವ ಸಿಸಿ ಕ್ಯಾಮರಾಗಳ ಜತೆಗೆ ಹೆಚ್ಚುವರಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ವೀಲ್ಹಿಂಗ್, ಓವರ್ ಸ್ಪೀಡ್, ಕರ್ಕಶ ಶಬ್ದ, ಕುಡಿದು ವಾಹನ ಚಾಲನೆ ತಡೆಗಾಗಿ ಸಂಚಾರ ಪೊಲೀಸರು, ತಜ್ಞರನ್ನೊಳಗೊಂಡ ಕ್ಷಿಪ್ರ ಪಡೆ ರಚನೆ ಮಾಡಲಾಗಿದೆ. ರಿಂಗ್ ರಸ್ತೆಯಲ್ಲಿ ೧೧೨ ಹೈವೇ ಪೆಟ್ರೋಲಿಂಗ್ ವಾಹನಗಳನ್ನು ನಿಯೋಜನೆ ಮಾಡಲಾಗುತ್ತದೆ. ಗರುಡ ವಾಹನಗಳು ಗಸ್ತು ತಿರುಗಲಿದ್ದು, ನಗರದ ಹೊರವಲಯದಲ್ಲಿ ವಿವಿಧೆಡೆ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗುತ್ತದೆ. ನಗರದ ಒಳ ಭಾಗದಲ್ಲೂ ಚೆಕ್ ಪೋಸ್ಟ್ ನಿರ್ಮಿಸಿ ಕಿಡಿಗೇಡಿಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ.
ಡಿ.೩೧ರ ರಾತ್ರಿ ಹೊಸ ವರ್ಷ ಆಚರಣೆ ನೆಪದಲ್ಲಿ ವಿದ್ಯಾರ್ಥಿಗಳು, ಯುವಕರು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಬಾರದು. ವರ್ತಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ ಮತ್ತು ಮಾದಕ ವಸ್ತುಗಳ ಸೇವನೆ ಮತ್ತು ಜೂಟಾಟ ನಡೆಸುವುದನ್ನು ನಿಷೇಸಲಾಗಿದೆ.
ಪೊಲೀಸ್ ಅನುಮತಿ ಕಡ್ಡಾಯ: ಸಂತೋಷ ಕೂಟ ನಡೆಸುವ ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂ ಸ್ಟೇ, ಸರ್ವೀಸ್ ಅಪಾರ್ಟ್‌ಮೆಂಟ್, ಅಪಾರ್ಟ್‌ಮೆಂಟ್ ಅಸೋಸಿಯೇಷನ್, ಮಾಲ್ಸ್ ಮತ್ತು ಸಂಘ ಸಂಸ್ಥೆಗಳು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಹೊಸ ವರ್ಷಾಚರಣೆಗೆ ರಾತ್ರಿ ೧ ಗಂಟೆಯವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಕಟ್ಟುನಿಟ್ಟಿನ ಸೂಚನೆಗಳು: ಸಾರ್ವಜನಿಕರು ತಮ್ಮ ಅಂಗಡಿ, ಮನೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳನ್ನು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಧ್ವನಿವರ್ದಕ ತಮ್ಮ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಬೇಕು. ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ, ಅರೆಬೆತ್ತಲೆ, ಮಾದಕ ವಸ್ತುಗಳ ಸೇವನೆ, ಜೂಜಾಟ ನಡೆಸುವುದು ನಿಷೇಧ. ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ನಿಲ್ಲಿಸಿ ಅವರ ಇಚ್ಚೆಗೆ ವಿರುದ್ದವಾಗಿ ಶುಭ ಕೋರುವ ನೆಪದಲ್ಲಿ ಕಿರಿಕಿರಿ ಉಂಟು ಮಾಡಬಾರದು. ರಸ್ತೆ, ಪಾರ್ಕ್, ವಾಹನಗಳಲ್ಲಿ ಕುಳಿತು ಮದ್ಯಪಾನ ಮಾಡಬಾರದು. ಸೋಷಿಯಾಲ್ ಮೀಡಿಯಾ ಮೂಲಕ ಹೊಸ ವರ್ಷಾಚರಣೆ ಸಂಬಂಧ ಅಪಪ್ರಚಾರ ಪೋಸ್ಟ್‌ಗಳನ್ನು ಹಾಕಬಾರದು. ಹೊಸ ವರ್ಷದ ಸಂಬಂಧ ಸಾಮಾಜಿಕ ಜಾಲಾತಾಣಗಳ ಮೂಲಕ ಉಡುಗೊರೆ ನೀಡುವ, ಉಡುಗೊರೆ ಬಂದಿರುವ ನೆಪದಲ್ಲಿ ಕಳುಹಿಸುವ ಯಾವುದೇ ಅಪರಿಚಿತ ಲಿಂಕ್‌ಗಳಿಗೆ ಮರುಳಾಗಿ ಡಿಜಿಟಲ್ ಮೋಸಕ್ಕೆ ಒಳಗಾಗಬಾರದು.
ನಗರದ ಭದ್ರತೆಗೆ ೧೬೦೦ ಸಿಬ್ಬಂದಿ: ಹೊಸ ವರ್ಷದ ಸಂಭಮಾಚರಣೆ ಸಂದಭ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದು, ಭದ್ರತೆಗೆ ೧೬೦೦ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ೪ ಡಿಸಿಪಿ, ೧೨ ಎಸಿಪಿ, ೩೨ ಪಿಐ, ೫೩ ಎಸ್‌ಐ, ೧೧೨ ಎಎಸ್‌ಐ, ೮೯೫ ಪೇದೆಗಳು, ೭೯ ಮಹಿಳಾ ಸಿಬ್ಬಂದಿ, ೧೨ ಸಿಎಆರ್ ಮತ್ತು ಕೆಎಸ್‌ಆರ್‌ಪಿ ತುಕಡಿ, ೨ ಕಮಾಂಡೋ ಪಡೆ, ೧ ಶ್ವಾನ ದಳ ಹಾಗೂ ೨ ಬಾಂಬ್ ಪತ್ತೆ ತಂಡವನ್ನು ಡಿ.೩೧ರ ರಾತ್ರಿಗೆ ನಿಯೋಜನೆ ಮಾಡಲಾಗಿದೆ.
ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಹೊಸ ವರ್ಷ ಆಚರಣೆ ವೇಳೆ ಅಸಭ್ಯವಾಗಿ ವರ್ತಿಸುವುದು, ಯಾರಿಗಾದರೂ ತೊಂದರೆ ನೀಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.
ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತರು