ಬೆಂಗಳೂರು: ಜ.6 ರಿಂದ ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳುತ್ತಿಲ್ಲ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಜನವರಿ 6 ರಿಂದ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಬಿಎಂಆರ್‌ಸಿಎಲ್ ಸ್ಪಷ್ಟನೆ ನೀಡಿದೆ.
ಬಿಎಂಆರ್‌ಸಿಎಲ್ ಹೇಳಿದ್ದೇನು?
ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗುತ್ತಿಲ್ಲ. ಬದಲಿಗೆ ಕೋಲ್ಕತ್ತಾದ ಟಿಟಾಗರ್ ರೈಲು ಸಂಸ್ಥೆ ಕಾರ್ಖಾನೆಯಲ್ಲಿ ತಯಾರಿಸಲಾದ ಮೊದಲ ರೈಲು ಸೆಟ್ ಜನವರಿ 6 ರಂದು ಅನಾವರಣಗೊಳ್ಳುತ್ತಿದೆ ಎಂದು ತಿಳಿಸಿದೆ.
ಬಹು ನಿರೀಕ್ಷಿತ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ನಮ್ಮ ಮೆಟ್ರೊ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಬೋಗಿಗಳು ಇನ್ನೂ ಬಂದಿಲ್ಲ. ಟಿಟಾಗರ್ ರೈಲ್ ಸಿಸ್ಟಂ ಲಿಮಿಟೆಡ್ ತನ್ನ ಮೊದಲ ರೈಲನ್ನು ಜನವರಿ 6 ರಂದು ಕೊಲ್ಕತ್ತಾದಿಂದ ಬೆಂಗಳೂರಿಗೆ ರವಾನಿಸಲಿದೆ. ಉಳಿದಂತೆ ಹಂತ ಹಂತವಾಗಿ ರೈಲುಗಳು ನಮ್ಮ ಮೆಟ್ರೋ ವನ್ನು ಸೇರಲಿದೆ.
ಹಳದಿ ಮಾರ್ಗ ಸಿದ್ಧವಾಗಿ ಹಲವು ತಿಂಗಳುಗಳು ಕಳೆದು ಸಂಚಾರ ಪರೀಕ್ಷೆಯೂ ಪೂರ್ಣಗೊಂಡಿದೆ. ಆದರೆ ಕಂಪನಿಗಳಿಂದ ರೈಲುಗಳ ಪೂರೈಕೆ ಕೊರತೆಯಿಂದ ಮಾರ್ಗದ ಉದ್ಘಾಟನೆ, ವಾಣಿಜ್ಯ ಸೇವೆ ಆರಂಭವಾಗಿಲ್ಲ.
ಗುರುವಾರ ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಇನ್ನಷ್ಟು ವಿಳಂಬವಾಗುತ್ತಿರುವುದಕ್ಕೆ ಸಂಸದ ತೇಜಸ್ವಿ ಸೂರ್ಯ ಬೇಸರ ವ್ಯಕ್ತಪಡಿಸಿದ್ದರು.
ಹಳದಿ ಮಾರ್ಗದ ಕಾರ್ಯಾಚರಣೆಯ ಪ್ರಾರಂಭವು BMRCL ನೀಡಿದ ಎಲ್ಲಾ ಗಡುವನ್ನು ಪೂರೈಸುವಲ್ಲಿ ವಿಫಲವಾಗಿದೆ. ಇದು ನಮ್ಮೆಲ್ಲರನ್ನು ನಿರಾಶೆಗೊಳಿಸಿದೆ. ರೈಲುಗಳ ಅಲಭ್ಯತೆಯೇ ಕಾರ್ಯಾಚರಣೆ ವಿಳಂಬಕ್ಕೆ ಪ್ರಮುಖ ಕಾರಣ. ಇದೀಗ ಕೆಲವು ಒಳ್ಳೆಯ ಸುದ್ದಿಗಳು ಸಿಕ್ಕಿವೆ ಎಂದು ತಿಳಿಸಿದ್ದಾರೆ. ಈಗ ಜನವರಿ 6 ರಂದು ಬೆಂಗಳೂರಿಗೆ ಕಳುಹಿಸಲು ಮೊದಲ ರೈಲು ಸಿದ್ಧವಾಗಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಎರಡನೇ ರೈಲನ್ನು ಮತ್ತು ಏಪ್ರಿಲ್‌ನಲ್ಲಿ ಮೂರನೇ ರೈಲನ್ನು ತಲುಪಿಸುವುದಾಗಿ ತೀತಗಢ್ ತಿಳಿಸಿದೆ. ಅದಾದ ಬಳಿಕ, ತಿಂಗಳಿಗೆ 1 ರೈಲನ್ನು ಸರಬರಾಜು ಮಾಡುವುದಾಗಿ ಹೇಳಿದೆ. ಸೆಪ್ಟೆಂಬರ್ ವೇಳೆಗೆ ತಿಂಗಳಿಗೆ 2 ರೈಲುಗಳಿಗೆ ಇದು ಹೆಚ್ಚಾಗುತ್ತದೆ. ಎಲ್ಲಾ CMRS ಅನುಮೋದನೆಗಳನ್ನು ಪಡೆಯಲು ಸರಿಯಾಗಿ ಕೆಲಸ ಮಾಡಲು ನಾನು BMRCLಗೆ ತಿಳಿಸಿದ್ದೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.