ಹೆಬ್ರಿ: ದಿಲ್ಲಿಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯ ಕ್ರಮದಲ್ಲಿ ಭಾಗವಹಿಸುವ ವಿಶೇಷ ಅವಕಾಶವು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗವಾದ ಶಿವಪುರ ಗ್ರಾ. ಪಂ. ವ್ಯಾಪ್ತಿಯ ಮುಳ್ಳುಗುಡ್ಡೆ ನಿವಾಸಿ ಸುಗಂಧಿ ನಾಯ್ಕ ಅವರಿಗೆ ಲಭಿಸಿದೆ.
ಶಿವಪುರ ಗ್ರಾಮದ ಶಿವದುರ್ಗೆ ಸಂಜೀವಿನಿ ಒಕ್ಕೂಟದ ಪ್ರಮುಖರಾಗಿರುವ ಸುಗಂಧಿ ಅವರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಅಡಿಕೆ, ಭತ್ತ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ. ಅಲ್ಲದೆ ಹಾಳೆ ತಟ್ಟೆ ಘಟಕ ನಿರ್ಮಿಸಿ ಸ್ವಾವಲಂಬಿ ಜೀವನಕ್ಕೆ ಮಾದರಿಯಾಗಿದ್ದಾರೆ. ಶಿವದುರ್ಗೆ ಸಂಜೀವಿನಿ ಒಕ್ಕೂಟವು 30 ಎಕ್ರೆ ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದು, ಉಡುಪಿ ಜಿ. ಪಂ, ಸಂಜೀವಿನಿ ಯೋಜನೆ ಇವರಿಗೆ ಸಹಕಾರ ನೀಡಿದೆ.
ಪತಿ ಶ್ರೀನಿವಾಸ್ ನಾಯ್ಕ ಅವರೊಂದಿಗೆ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ಬಂದಿದೆ. ಜಿ. ಪಂ. ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ಸುಗಂಧಿ ನಾಯ್ಕ ಹೇಳಿದ್ದಾರೆ.