ಬೆಂಗಳೂರು: ಸ್ಕೂಟಿಯಲ್ಲಿ ಹೋಗುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಬಿಬಿಎಂಪಿ ಕಸದ ಲಾರಿ ಹತ್ತಿಸಿರೋ ದಾರುಣ ಘಟನೆ ಥಣಿಸಂದ್ರ ಮುಖ್ಯರಸ್ತೆಯಲ್ಲಿ ನಡೆದಿದೆ. ಥಣಿಸಂದ್ರ ಮುಖ್ಯರಸ್ತೆಯ ಝೂಡಿಯೋ ಮುಂಭಾಗ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ಮೃತರನ್ನು ನಿಘಾರ್ ಸುಲ್ತಾನ್ (30), ನಿಘಾರ್ ಇರ್ಫಾನ್ (32) ಎಂದು ಗುರುತಿಸಲಾಗಿದೆ. ಇಬ್ಬರು ಮಹಿಳೆಯರು ಟಿವಿಎಸ್ ಜೂಬಿಟರ್ ಸ್ಕೂಟಿಯಲ್ಲಿ ಗೋವಿಂದಪುರದಿಂದ ಥಣಿಸಂದ್ರದ ಕಡೆ ಹೋಗುತ್ತಾ ಇದ್ದರು.
ನಿಘಾರ್ ಸುಲ್ತಾನ್ ಹಾಗೂ ಇರ್ಫಾನ್ ಟಿವಿಎಸ್ ಜೂಬಿಟರ್ ಸ್ಕೂಟಿಯಲ್ಲಿ ರಸ್ತೆಯ ಎಡಭಾಗದಲ್ಲಿ ಹೋಗುತ್ತಾ ಇದ್ದರು. ಝೂಡಿಯೋ ಮುಂಭಾಗ ಸ್ಕೂಟಿ ಮುಂದೆ ಹೋಗುತ್ತಿದ್ದ ಕಾರು ಸಡನ್ ಆಗಿ ನಿಂತಿದೆ. ಆಗ ಗಾಬರಿಯಿಂದ ಮಹಿಳೆಯರು ಬಲಕ್ಕೆ ತೆಗೆದುಕೊಂಡಿದ್ದಾರೆ. ಆಗ ಹಿಂಭಾಗದಿಂದ ವೇಗವಾಗಿ ಬಂದ ಕಸದ ಲಾರಿ ಡಿಕ್ಕಿಯಾಗಿದೆ.
ಕಸದ ಲಾರಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ರಸ್ತೆ ಮೇಲೆ ಬಿದ್ದಿದ್ದಾರೆ. ಆಗ ಲಾರಿಯ ಎಡಭಾಗದ ಮುಂದಿನ ಚಕ್ರ ಹರಿದು ನಿಘಾರ್ ಸುಲ್ತಾನ್, ನಿಘಾರ್ ಇರ್ಫಾನ್ ಇಬ್ಬರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಸ್ಕೂಟಿ ಮೇಲೆ ಹೋಗುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಲಾರಿ ಹತ್ತಿಸಲಾಗಿದೆ. ಲಾರಿ ಡ್ರೈವರ್ ನಿರ್ಲಕ್ಷ್ಯದಿಂದ ಈ ಅಪಘಾತ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಯಲಹಂಕ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ. ಬಿಬಿಎಂಪಿ ಕಸದ ಲಾರಿ ಚಾಲಕ ಗಾಡಿಲಿಂಗ ಎಂಬುವವರನ್ನ ಹೆಣ್ಣೂರು ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿಘಾರ್ ಸುಲ್ತಾನ್, ನಿಘಾರ್ ಇರ್ಫಾನ್ ಇಬ್ಬರಿಗೂ ಮದುವೆ ಆಗಿ 15 ವರ್ಷ ಆಗಿದೆ. ಇಬ್ಬರಿಗೂ 4 ಮಕ್ಕಳಿದ್ದಾರೆ. ಈ ಇಬ್ಬರು ಮಹಿಳೆಯರಿಗೆ ಹುಷಾರು ಇರಲಿಲ್ಲ. ಔಷಧಿ ತೆಗೆದುಕೊಳ್ಳಲು ಹೆಗಡೆ ನಗರದ ಅಂಗಡಿಗೆ ಹೋಗುತ್ತಾ ಇದ್ದರು. ನಿಘಾರ್ ಪತಿ ಆಟೋ ಡ್ರೈವರ್ ಆಗಿದ್ದು, ನಮಗೆ ನ್ಯಾಯ ಬೇಕು ಎಂದು ಒತ್ತಾಯಿಸುತ್ತಿದ್ದಾರೆ.