ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಪಕ್ಷ ನಾಯಕ ಹಾಗೂ ಸದಸ್ಯರು ನಗರದಲ್ಲಿ ಶೇ.50ರಷ್ಟು ಜನರಿಗೆ ಸಂಸ್ಕರಿಸದ ನೀರು ಪೂರೈಕೆಯಾಗುತ್ತಿರುವ ಕುರಿತಂತೆ ಮಾಡಿರುವ ಆರೋಪ ಗಂಭೀರ ವಿಚಾರವಾಗಿದೆ. ಈ ಬಗ್ಗೆ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಹಾಗೂ ತಜ್ಞರನ್ನು ಒಳಗೊಂಡು ಸತ್ಯಶೋಧನಾ ಸಮಿತಿ ರಚಿಸಿ ವರದಿಯನ್ನು ಮುಖ್ಯಮಂತ್ರಿಗೆ ಒಪ್ಪಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ಲಾಲ್ ಬಾಗ್ ನಲ್ಲಿರೋ ಮನಪಾ ಕಚೇರಿಯಲ್ಲಿನ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 13 ನದಿಗಳು ಕಲುಷಿತಗೊಂಡಿರುವ ವರದಿಯಲ್ಲಿ ನೇತ್ರಾವತಿ ನದಿಯೂ ಸೇರಿದ್ದು, ನಗರ ಪಾಲಿಕೆಯ 60 ವಾರ್ಡ್ ಗಳಿಗೆ ನೀರು ಪೂರೈಕೆ ಪ್ರಮುಖ ಜೀವನದಿ ಇದಾಗಿರುವುದರಿಂದ ಈ ವಿಚಾರ ಗಂಭೀರವಾಗಿದೆ ಎಂದರು.