ನವದೆಹಲಿ: ಇಂದಿನಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಣಿಪುರದ ಪರಿಸ್ಥಿತಿ ಮತ್ತು ದೆಹಲಿ ನಾಗರಿಕ ಸೇವಾ ಸಿಬ್ಬಂದಿಯ ಸುಗ್ರೀವಾಜ್ಞೆ ಸೇರಿದಂತೆ ಹಲವು ವಿಷಯಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ.
ಮಣಿಪುರದಲ್ಲಿ ಹಿಂಸಾಚಾರದ ಬಗ್ಗೆ ಚರ್ಚೆಗೆ ಸರ್ಕಾರ ಒಪ್ಪಿಗೆ ನೀಡಿದರೆ, ಪ್ರಧಾನ ವಿರೋಧ ಪಕ್ಷವಾದ ಕಾಂಗ್ರೆಸ್ ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಒತ್ತಾಯಿಸಲು ಹಠ ಹಿಡಿದಿದೆ. ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮುಖಾಮುಖಿಯಾಗುವ ಸಾಧ್ಯತೆಯಿರುವ ಇನ್ನೊಂದು ಪ್ರಮುಖ ವಿಷಯವೆಂದರೆ ದೆಹಲಿ ಸೇವಾ ಸುಗ್ರೀವಾಜ್ಞೆ.
ಮಣಿಪುರದಲ್ಲಿನ ಹಿಂಸಾಚಾರ ಬಗ್ಗೆ ಪ್ರಧಾನಿ ಹೇಳಿಕೆ ನೀಡುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಲೇ ಬಂದಿದ್ದು ಸದನದಲ್ಲಿ ತೀವ್ರ ಗದ್ದಲ ನಡೆಸುವ ಸಾಧ್ಯತೆಯಿದೆ.
ದೆಹಲಿ ಅಧಿಕಾರಶಾಹಿಗಳ ಮೇಲಿನ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮುಂಗಾರು ಅಧಿವೇಶದಲ್ಲಿ ಭಾರಿ ಮುಖಾಮುಖಿಯಾಗುವ ನಿರೀಕ್ಷೆಯಿದೆ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. ಪ್ರತಿಪಕ್ಷದಲ್ಲಿ 105 ಸದಸ್ಯರು ಮಸೂದೆಯನ್ನು ವಿರೋಧಿಸಿದ್ದಾರೆ.
ಬಿಜೆಪಿ ಮತ್ತು ಮಿತ್ರಪಕ್ಷಗಳು 105 ಸದಸ್ಯರನ್ನು ಹೊಂದಿರುವ ರಾಜ್ಯಸಭೆಯಲ್ಲಿ ಈ ಮಸೂದೆ ಆಡಳಿತ ಪಕ್ಷಕ್ಕೆ ವರವಾಗುವ ಸಾಧ್ಯತೆಯಿದೆ. ಬಿಜೆಪಿ ಐವರು ನಾಮನಿರ್ದೇಶಿತ ಹಾಗೂ ಇಬ್ಬರು ಸ್ವತಂತ್ರ ಸಂಸದರ ಬೆಂಬಲದ ವಿಶ್ವಾಸದಲ್ಲಿದೆ. ತಲಾ ಒಬ್ಬ ಸಂಸದರನ್ನು ಹೊಂದಿರುವ ಮಾಯಾವತಿಯವರ ಬಹುಜನ ಸಮಾಜ ಪಕ್ಷ, ಜನತಾ ದಳ ಸೆಕ್ಯುಲರ್ ಮತ್ತು ತೆಲುಗು ದೇಶಂ ಪಕ್ಷದ ಬೆಂಬಲವನ್ನೂ ಅದು ನಿರೀಕ್ಷಿಸುತ್ತಿದೆ.
ಮೇ 3 ರಿಂದ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತಿರುವ ಮಣಿಪುರ ರಾಜ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಇಂದು ಸಂಸತ್ತಿನ ಅಧಿವೇಶನ ಆರಂಭ ದಿನವೇ ಕೆಲವು ಪಕ್ಷಗಳು ಮುಂದೂಡಿಕೆ ನಿರ್ಣಯವನ್ನು ಮಂಡಿಸಲು ಯೋಜಿಸಿವೆ.
ಮಂಡನೆಯಾಗಲಿರುವ ಮಸೂದೆಗಳ ವಿವರ:
ಅಧಿವೇಶನದಲ್ಲಿ ಸರ್ಕಾರವು 31 ಮಸೂದೆಗಳನ್ನು ಮಂಡಿಸಲಿದೆ. ಇದರಲ್ಲಿ ದೆಹಲಿ ಸರ್ಕಾರದ ತಿದ್ದುಪಡಿ ಮಸೂದೆ 2023, ಅಂಚೆ ಸೇವೆಗಳ ಮಸೂದೆ 2023, ಡಿಜಿಟಲ್ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ 2023, ಪುರಾತನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಅಗತ್ಯ ತಿದ್ದುಪಡಿ ಮಸೂದೆ 2023, ಅಂತಾರಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ಬ್ಯಾಂಕ್ ಮಸೂದೆ 2023 ಸಹ ಪಟ್ಟಿಯಲ್ಲಿ ಸೇರಿಸಲಾಗಿದೆ.ರಾಷ್ಟ್ರೀಯ ದಂತ ಆಯೋಗದ ಮಸೂದೆ 2023, ರಾಷ್ಟ್ರೀಯ ಶುಶ್ರೂಷೆ ಮತ್ತು ಸೂಲಗಿತ್ತಿ ಆಯೋಗದ ಮಸೂದೆ 2023, ಔಷಧಗಳ ವೈದ್ಯಕೀಯ ಸಾಧನಗಳ ಸೌಂದರ್ಯವರ್ಧಕಗಳ ಮಸೂದೆ 2023, ಜನನ ಮತ್ತು ಮರಣ ನೋಂದಣಿ ತಿದ್ದುಪಡಿ ಮಸೂದೆ 2023, ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ತಿದ್ದುಪಡಿ ಮಸೂದೆ 2023, ಸಿನಿಮಾಟೋಗ್ರಾಫ್ ಬಿಲ್, ವಕೀಲರ ತಿದ್ದುಪಡಿ ಮಸೂದೆ 2023, ಗಣಿ ಮತ್ತು ಖನಿಜಗಳ ಅಭಿವೃದ್ಧಿ ಮತ್ತು ನಿಯಂತ್ರಣ ತಿದ್ದುಪಡಿ ಮಸೂದೆ 2023, ರೈಲ್ವೆ ತಿದ್ದುಪಡಿ ಮಸೂದೆ 2023, ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಮಸೂದೆ 2023 ಅನ್ನು ಸಹ ಪರಿಚಯಿಸಲು ಪಟ್ಟಿ ಮಾಡಲಾಗಿದೆ. ಜೊತೆಗೆ, ಜೀವವೈವಿಧ್ಯ ತಿದ್ದುಪಡಿ ಮಸೂದೆ 2022 ಮತ್ತು ಮಲ್ಟಿ ಸ್ಟೇಟ್ ಕೋಆಪರೇಟಿವ್ ಸೊಸೈಟಿ ತಿದ್ದುಪಡಿ ಮಸೂದೆ 2022 ಅನ್ನು ಅಂಗೀಕಾರ ಮಾಡುವ ಸಾಧ್ಯತೆ ಇದೆ.
ಸಂಸತ್ತಿನ ಮುಂಗಾರು ಅಧಿವೇಶನವು ಆಗಸ್ಟ್ 11 ರವರೆಗೆ ಮುಂದುವರಿಯುತ್ತದೆ. ಅಧಿವೇಶನದಲ್ಲಿ ಒಟ್ಟು 17 ದಿನ ಕಲಾಪಗಳು ನಡೆಯಲಿವೆ. ಹಳೆಯ ಸಂಸತ್ ಭವನದಲ್ಲಿ ಅಧಿವೇಶನ ಆರಂಭವಾಗಲಿದ್ದು, ನಂತರ ಹೊಸ ಕಟ್ಟಡಕ್ಕೆ ಮಧ್ಯಭಾಗದಲ್ಲಿ ವರ್ಗಾವಣೆಯಾಗಲಿದ್ದಾರೆ.