ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಕಾಲೋನಿಯ ಸಮುದಾಯ ಭನವದಲ್ಲಿ ರಾಜ್ಯ ಸರ್ಕಾರದ ವಿಶಿಷ್ಟ ಅಭಿಯಾನವಾಗಿರುವ ನನ್ನ ಗುರುತು ಅಭಿಯಾನದ ಮೊದಲ ಹಂತದ ದಾಖಲೆಗಳನ್ನು ನೀಡುವ ಪ್ರತಿಕ್ರಿಯೆಗೆ ಜಿಪಂ ಉಪಕಾರ್ಯದರ್ಶಿ ಲಕ್ಷ್ಮಿ ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ, ರಾಜ್ಯದಲ್ಲಿ ಎರಡು ಕಡೆ ಮಾತ್ರ ಪ್ರಾಯೋಗಿಕವಾಗಿ ಈ ಯೋಜನೆಗೆ ಚಾಲನೆ ನೀಡಲಾಗಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರಿಗೆ ಸರ್ಕಾರದ ೧೩ ಸೇವೆಗಳನ್ನು ಅವರಿದ್ದಲ್ಲಿಗೇ ಕೊಂಡೊಯ್ಯುವ ವಿಶಿಷ್ಟ ಯೋಜನೆ ಇದಾಗಿದೆ. ಒಟ್ಟು ೮ ಇಲಾಖೆಗಳ ವ್ಯಾಪ್ತಿಗೆ ಒಳಪಡುವ ಆಧಾರ್ ಗುರುತಿನ ಚೀಟಿ ನೀಡಿಕೆ, ಜನನ,ಮರಣ ಪ್ರಮಾಣ ಪತ್ರ, ಜಾತಿ, ಆದಾಯ ಪ್ರಮಾಣಪತ್ರ, ಪಡಿತರ ಗುರುತಿನ ಚೀಟಿ, ಆಧಾರ್ ಜೋಡಣೆಯೊಂದಿಗೆ ವೈಯುಕ್ತಿಕ ಬ್ಯಾಂಕ್ ಉಳಿತಾಯ ಖಾತೆ, ವಿವಿಧ ಯೋಜನೆಗಳಿ ಪಿಂಚಣಿ ಯೋಜನೆಗಳು, ಆಯುಷ್ಮಾನ್ ಭಾರತ್ ಆರೋಗ್ಯ ಗುರುತಿನ ಚೀಟಿ, ಆರೋಗ್ಯ ವಿಮೆಗಳು, ಇ-ಶ್ರಮ ಗುರುತಿನ ಚೀಟಿ, ಭಾಗ್ಯಲಕ್ಷ್ಮಿ ಯೋಜನೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯ ಚೀಟಿಗಳನ್ನು ಒದಗಿಸುವ ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳು, ಯುವಜನ ಮತ್ತು ಸಬಲೀಕರಣ ಸೇವೆಗಳು, ಕಾರ್ಮಿಕ ಮತ್ತು ವಿವಿಧ ಇಲಾಖೆಗಳ ಸಮನ್ವಯದಲ್ಲಿ ಸದರಿ ಅಭಿಯಾನವನ್ನು ಅನುಷ್ಠಾನಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಪಿಡಿಒ ಶಶಿಕಲಾ ಮಾತನಾಡಿ ಬಿಳಿಗಿರಿರಂಗನಬೆಟ್ಟದಲ್ಲಿ ಈ ಸಂಬಂಧ ಕಳೆದ ೩ ತಿಂಗಳಿಂದ ಇದರ ಬಗ್ಗೆ ಸರ್ವೇ ಮಾಡಲಾಗುತ್ತಿದೆ. ಇಲ್ಲಿ ಒಟ್ಟು ೭೫೦ ಕುಟುಂಬಗಳಿವೆ. ಈ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ ಮಾತ್ರ ಈ ಸೌಲಭ್ಯ ನೀಡಲು ಅವಕಾಶವಿದೆ. ಬೆಟ್ಟದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸೋಲಿಗ ಜನಾಂಗವೇ ಹೆಚ್ಚಾಗಿದೆ. ಇದರಲ್ಲಿ ಅನೇಕರು ಸರ್ಕಾರದ ಅನೇಕ ಸೌಲಭ್ಯಗಳನ್ನು ಪಡೆದುಕೊಂಡಿಲ್ಲ. ಹೆಚ್ಚಾಗಿ ಇ-ಶ್ರಮ್ ಕಾರ್ಡ್‌ಗಳು ಹಾಗೂ ವಿವಿಧ ವಿಮಾ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ ಎಲ್ಲರನ್ನೂ ಒಂದು ಕಡೆ ಸೇರಿಸಿ ಇದನ್ನು ಮಾಡಿಸಿಕೊಡುವ, ಇರುವ ದಾಖಲೆಗಳನ್ನು ಡಿಜಿ ಲಾಕರ್‌ಗೆ ಸೇರಿಸುವ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲಾಗಿದೆ. ಇದೊಂದು ಸರ್ಕಾರದ ಪೈಲಟ್ ಪ್ರಾಜೆಕ್ಟ್ ಆಗಿದ್ದು ರಾಜ್ಯದಲ್ಲಿ ಪ್ರಥಮವಾಗಿ ಬೆಂಗಳೂರು ನಗರ ಹಾಗೂ ಬಿಳಿಗಿರಿರಂಗನಬೆಟ್ಟದಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದ್ದು. ಈ ಪ್ರಕ್ರಿಯೆಯನ್ನು ನಾಲ್ಕು ಹಂತದಲ್ಲಿ ಬೆಟ್ಟದಲ್ಲಿ ಮಾಡಲಾಗುತ್ತಿದೆಎಂದು ಮಾಹಿತಿ ನೀಡಿದರು.
ಗ್ರಾಪಂ ಅಧ್ಯಕ್ಷ ಸಿ.ಡಿ. ಮಹಾದೇವ ಉಪಾಧ್ಯಕ್ಷೆ ಕಮಲಮ್ಮ ಸದಸ್ಯರಾದ ಎಚ್. ಪ್ರತೀಪ್‌ಕುಮಾರ್, ಮಾದಮ್ಮ, ರಂಗಮ್ಮ, ಬಸವಣ್ಣ, ಸಾಕಮ್ಮ ಕಾರ್ಯದರ್ಶಿ ನಟರಾಜು ಗ್ರಾಮ ಲೆಕ್ಕಿಗರಾದ ಶರತ್, ಪ್ರವೀಣ್, ನಂದಕುಮಾರ್, ಸಚಿನ್, ಗುರು ಸೇರಿದಂತೆ ಅನೇಕರು ಇದ್ದರು.
ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ಸಮುದಾಯ ಭವನದಲ್ಲಿ ನನ್ನ ಗುರುತು ಅಭಿಯಾನಕ್ಕೆ ಗ್ರಾಪಂ ಅಧ್ಯಕ್ಷ ಸಿ.ಡಿ. ಮಹಾದೇವ ಚಾಲನೆ ನೀಡಿದರು. ಉಪಾಧ್ಯಕ್ಷೆ ಕಮಲಮ್ಮ ಸೇರಿದಂತೆ ಅನೇಕರು ಇದ್ದರು.