ಬೆಂಗಳೂರು: ಉಪ ವಿಭಾಗಾಧಿಕಾರಿಗಳ (ಎಸಿ) ನ್ಯಾಯಾಲಯಗಳಲ್ಲಿ ಅವಧಿ ಮೀರಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನೂ ಮುಂದಿನ ಆರು ತಿಂಗಳೊಳಗಾಗಿ ಇತ್ಯರ್ಥಗೊಳಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಗಡುವು ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಎಸಿ ನ್ಯಾಯಾಲಯಗಳಲ್ಲಿ ಯಾವ ಪ್ರಕರಣಗಳನ್ನೂ ಆರು ತಿಂಗಳಿಗಿಂತ ಹೆಚ್ಚಿನ ಕಾಲ ಇಟ್ಟುಕೊಳ್ಳುವಂತಿಲ್ಲ ಎಂಬ ಕಾನೂನಿದೆ. ಆದರೆ, ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ವೇಳೆ ಎಸಿ ನ್ಯಾಯಾಲಯಗಳಲ್ಲಿ ಅವಧಿ ಮೀರಿದ 60 ಸಾವಿರಕ್ಕೂ ಅಧಿಕ ಪ್ರಕರಣಗಳಿದ್ದವು. ಇನ್ನೂ 29,000ಕ್ಕೂ ಅಧಿಕ ಪ್ರಕರಣ ಬಾಕಿ ಇವೆ.
ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ಉಪ-ವಿಭಾಗಾಧಿಕಾರಿಗಳನ್ನು ನೇಮಕ ಮಾಡಿದರೂ ಶೇ.55ರಷ್ಟು ಪ್ರಕರಣ ಮಾತ್ರ ವಿಲೇ ಮಾಡಲಾಗಿದ್ದು, ಪ್ರಕರಣಗಳನ್ನು ನ್ಯಾಯಯುತ ವಿಲೇಗೆ ಒಳಪಡಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಭಿಯಾನ ಮಾದರಿಯಲ್ಲಿ ಕೆಲಸ ಮಾಡಬೇಕೆಂದು ಹೇಳಿದರು.