ಮಂಡ್ಯ: ವಿಶ್ವದ ಪ್ರಗತಿಯಲ್ಲಿ ಭಾರತೀಯ ವಿದ್ಯಾವಂತ ಯುವಕರ ಕೊಡುಗೆ ಅಪಾರವಾಗಿದೆ ಎಂದು ಅನಿವಾಸಿ ಭಾರತೀಯ ಹಾಗೂ ಎಚ್.ಕೆ.ವೀರಣ್ಣಗೌಡ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಚ್.ಕೆ. ಮರಿಯಪ್ಪ ಹೇಳಿದರು.
ಪಟ್ಟಣದ ಶಾಂತಮರಿಯಪ್ಪ ಕಾನ್ವೆಂಟ್ ನಲ್ಲಿ ಮಂಡ್ಯ ಪಿ.ಡಿ.ಎಫ್ ಲಯನ್ಸ್ ಸಂಸ್ಥೆ ವತಿಯಿಂದ ಕಸ್ತೂರಿ ಬಾ ಉನ್ನತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು ವಿಶ್ವದಲ್ಲೇ ಅತಿ ಹೆಚ್ಚು ಯುವ ಸಂಪನ್ಮೂಲ ಹೊಂದಿರುವ ಭಾರತ ಮುಂದಿನ ದಿನಗಳಲ್ಲಿ ಮುಂದುವರಿದ ರಾಷ್ಟ್ರವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ನಮ್ಮ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರತಿಭಾನ್ವಿತರಿದ್ದು ಉನ್ನತ ಶಿಕ್ಷಣವನ್ನು ಪಡೆದು ವಿದೇಶಗಳಿಗೆ ಪಲಾಯನವಾಗುತ್ತಿರುವುದು ವಿಶಾದನೀಯವಾದರು ಅಲ್ಲಿನ ರಾಷ್ಟ್ರ ನಿರ್ಮಾಣದಲ್ಲಿ ಭಾರತೀಯ ಯುವಕರು ಪ್ರಮುಖ ಪಾತ್ರ ವಹಿಸುತ್ತಿರುವುದು ಭಾರತೀಯ ಹಿರಿಮೆಯಾಗಿದೆ ಎಂದು ಅವರು ಹೇಳಿದರು.
ಭಾರತೀಯ ನೆಲದಲ್ಲಿ ಪ್ರತಿಭಾನ್ವಿತರಿಗೆ ಕೊರತೆಯಿಲ್ಲ ಆದರೆ ಅವರನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ ಬಹು ಮುಖ್ಯವಾಗಿದ್ದು, ಸದಾ ಕಾಲ ಪ್ರತಿಭಾನ್ವಿತರಿಗೆ ಸೂಕ್ತವಾದ ಅವಕಾಶಗಳನ್ನು ಕಲ್ಪಿಸಿ ಕೊಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಕಿವಿ ಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಸಿ. ಅನಂತಕುಮಾರ್ ಮಾತಾನಾಡಿ ಲಯನ್ಸ್ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಶೈಕ್ಷಣಿಕ ಅಭಿವೃದ್ದಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತದೆ ಎಂದರು.
ಈ ವೇಳೆಯಲ್ಲಿ ಸಾಹಿತಿಗಳಾದ ಭೈರಮಂಗಲ ರಾಮೇಗೌಡ, ಗೋಪಾಲಯ್ಯ, ಎಂ. ಎಲ್., ನಿವೃತ್ತ ಇಂಜಿನಿಯರ್ ಮಾದಯ್ಯ, ಎಂ.ಹೆಚ್.ಚನ್ನೇಗೌಡ ವಿದ್ಯಾನಿಲಯದ ಸಿ. ಅಪೂರ್ವಚಂದ್ರ, ಲಯನ್ ಪದಧಾಧಿಕಾರಿಗಳಾದ ರಜತ್, ಹರ್ಷ, ಶಿವಕುಮಾರ್, ಶರತ್, ಮಂಜು, ರಾಜೇಶ್, ಮುಖ್ಯ ಶಿಕ್ಷಕರಾದ ಎಂ.ಟಿ.ಚಂದ್ರಶೇಖರ್, ಎನ್.ಕೃಷ್ಣ, ಕೆ.ಎನ್. ವರದರಾಜ್, ಯು.ಎಸ್.ರವಿ ಸೇರಿದಂತೆ ಇತರರು ಹಾಜರಿದ್ದರು.