ರಾಮನಗರ:ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗಿ, ಚಿಕುನ್‍ಗುನ್ಯ, ಮೆದುಳು ಜ್ವರ, ಆನೆಕಾಲು ರೋಗಗಳು ಹರಡುತ್ತಿದ್ದು ಇವುಗಳನ್ನು ನಿಯಂತ್ರಿಸಲು ಕ್ರಮವಹಿಸುವಂತೆ ಡಾ.ಶಶಿಧರ್ ತಿಳಿಸಿದರು.
ಅವರು ಇಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ರಾಮನಗರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಮನಗರ , ಹಾಗೂ ಇತರೆ ಇಲಾಖೆಗಳ ಸಹಯೋಗದೊಂದಿಗೆ ಸರ್ಕಾರಿ / ಖಾಸಗಿ ಹಿರಿಯ ಪಾಠಶಾಲೆ ಮತ್ತು ಪ್ರೌಢಶಾಲಾ ವಿಜ್ಞಾನ ಶಿಕ್ಷಕರುಗಳಿಗೆ ರೋಗವಾಹಕ ಆಶ್ರಿತ ರೋಗಗಳು ಹಾಗೂ ನಿಯಂತ್ರಣ ಕುರಿತು ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಲೇರಿಯಾ ವಿರೋಧ ಮಾಸಾಚರಣೆ ಅಂಗವಾಗಿ ಸರ್ಕಾರಿ / ಖಾಸಗಿ ಹಿರಿಯ ಪಾಠಶಾಲೆ ಹಾಗೂ ಪ್ರೌಢಶಾಲೆಯ ಪ್ರತಿ ಶಾಲೆಯಿಂದ ಒಬ್ಬ ವಿಜ್ಞಾನ ಶಿಕ್ಷಕರಿಗೆ ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗಿ, ಚಿಕುನ್‍ಗುನ್ಯ, ಮೆದುಳು ಜ್ವರ, ಆನೆಕಾಲು ರೋಗಗಳು ಹಾಗೂ ನಿಯಂತ್ರಣ ಕುರಿತು ತರಬೇತಿ ಹಮ್ಮಿಕೊಂಡಿದ್ದು ಕಾರ್ಯಾಗಾರ ಮುಗಿದ ನಂತರ ನೀವುಗಳು ಸಂಪನ್ಮೂಲ ವ್ಯಕ್ತಿಯೆಂದು ಪರಿಗಣಿಸಲಾಗುವುದು ಎಂದರು. ತಮ್ಮ ಶಾಲಾ ಮಕ್ಕಳಿಗೆ ಸೊಳ್ಳೆಗಳಿಂದ ಹರಡುವ ರೋಗಗಳು, ರೋಗಲಕ್ಷಣಗಳು, ಪತ್ತೆ, ಚಿಕಿತ್ಸೆ ಮುಖ್ಯವಾಗಿ ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಹಕರಿಸುವಂತೆ ಸಲಹೆ ನೀಡಿದರು.
ಡಾ. ಶಶಿಕಲಾ, ತಾಲ್ಲೂಕು ಆರೋಗ್ಯಾಧಿಕಾರಿಗಳು, ಮಾತನಾಡುತ್ತಾ ಕಾರ್ಯಾಗಾರದ ಮುಖ್ಯ ಉದ್ದೇಶ ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಶಾಲಾ ಮಕ್ಕಳಲ್ಲಿ ಅರಿವು ಮೂಡಿಸಲು ತಮಗೆ ಮಾಹಿತಿ ನೀಡಲಾಗುತ್ತಿದ್ದು ಸಂಪನ್ಮೂಲ ವ್ಯಕ್ತಿಯಾದ ತಾವುಗಳು ಮಕ್ಕಳಲ್ಲಿ ಅರಿವು ಮೂಡಿಸಿ ಸೊಳ್ಳೆನಿಯಂತ್ರಣ ವಿಧಾನಗಳ ಮಾದರಿ ಪ್ರದರ್ಶನ ಸ್ಪರ್ದೆಯನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗುವುದು. ಮಕ್ಕಳು ಭಾಗವಹಿಸುವಂತೆ ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.
ಶ್ರೀಮತಿ ಸೌಮ್ಯ, ಕೀಟಶಾಸ್ತ್ರಜ್ಞರು, ರೋಗ ಲಕ್ಷಣಗಳ ಕುರಿತು ಮಾತನಾಡುತ್ತಾ ಸೊಳ್ಳೆಗಳಿಂದ ಪ್ರಮುಖವಾಗಿ ಮಲೇರಿಯ, ಡೆಂಗಿ, ಚಿಕುನ್ ಗುನ್ಯ, ಮೆದುಳುಜ್ವರ ರೋಗಗಳು ಹರಡುತ್ತವೆ. ಸೋಂಕಿತ ಸೊಳ್ಳೆಗಳು ಆರೋಗ್ಯವಂತ ವ್ಯಕ್ತಿಯನ್ನು ಕಚ್ಚಿದಾಗ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಮಲೇರಿಯ ಸೋಂಕು ತಗುಲಿದಾಗ ಚಳಿ, ಜ್ವರ, ತಲೆನೋವು, ನಡುಕ, ವಾಂತಿ, ವಾಕರಿಕೆ, ಮೈ-ಕೈನೋವು, ಡೆಂಗಿಜ್ವರದಲ್ಲಿ ಮೈಮೇಲೆ ಕೆಂಪು ಗಂದೆಗಳು, ಕಣ್ಣಿನ ಹಿಂಬಾಗ ನೋವು, ಸೋಂಕು ತೀವ್ರ ತರವಾದಾಗ ವಸಡು, ಮೂಗು, ಕಿವಿಗಳಲ್ಲಿ ರಕ್ತಸ್ರಾವ ಡಾಂಬರು ಬಣ್ಣದ ಮಲವಿಸರ್ಜನೆ, ಚಿಕುನ್‍ಗುನ್ಯದಲ್ಲಿ ಜ್ವರ, ಸಣ್ಣ-ಸಣ್ಣ ಕೀಲುಗಳ ನೋವು, ಮೆದುಳು ಜ್ವರದಲ್ಲಿ ತೀವ್ರತರ ಜ್ವರ, ಜ್ಞಾನ ತಪ್ಪುವುದು, ಆನೇಕಾಲು ರೋಗದಲ್ಲಿ ಕಾಲುಗಳು ಮತ್ತು ವೃಷಣಭಾಗದ ಊತ ಇಂತಹ ಲಕ್ಷಣಗಳು ಕಂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಬೇಕು ಒಂದುವೇಳೆ ಪ್ರಕರಣಗಳು ದೃಢಪಟ್ಟಲ್ಲಿ ಸೂಕ್ತ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು. ಈ ಮಾಹಿತಿಯನ್ನು ಮಕ್ಕಳಿಗೆ ತಿಳಿಸುವುದರಿಂದ ಅವರು ಪೋಷಕರಿಗೆ ಮಾಹಿತಿ ನೀಡಿ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶ್ರೀ ಬಿ.ಎಸ್. ಗಂಗಾಧರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಿಯಂತ್ರಣ ಕ್ರಮಗಳ ಕುರಿತು ಮಾತನಾಡಿ ಸ್ವಯಂ ರಕ್ಷಣಾ ವಿಧಾನ, ಪರಿಸರ ವಿಧಾನ, ಜೈವಿಕ ಮತ್ತು ರಾಸಾಯನಿಕ ವಿಧಾನಗಳಲ್ಲಿ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಬಹುದು. ಸ್ವಯಂ ರಕ್ಷಣಾ ವಿಧಾನದಲ್ಲಿ ಸ್ವಯಂ ರಕ್ಷಣ ವಿಧಾನದಲ್ಲಿ ಮೈತುಂಬ ಬಟ್ಟೆ ಧರಿಸುವುದು, ಸಂಜೆ ವೇಳೆ ಬೇವಿನ ಸೊಪ್ಪು ಅಥವಾ ಸಾಂಮ್ರಾಣಿ ಧೂಪ ಹಾಕುವುದು ಮತ್ತು ಕಿಟಕಿ ಬಾಗಿಲುಗಳನ್ನು ಮುಚ್ಚುವುದು, ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು. ಪರಿಸರ ವಿಧಾನದಲ್ಲಿ ನೀರು ಶೇಖರಣೆ ಪರಿಕರಗಳಾದ ಸಿಮೆಂಟ್ ತೊಟ್ಟಿ, ಬ್ಯಾರಲ್, ಮಣ್ಣಿನ ಮಡಿಕೆ ಇವುಗಳನ್ನು ವಾರಕೊಮ್ಮೆ ಸ್ವಚ್ಛಗೊಳಿಸಬೇಕು ಹಾಗೂ ಘನತ್ಯಾಜ್ಯಗಳಾದ ಟೈರು, ಎಳನೀರ ಚಿಪ್ಪು, ಒಡೆದ ಪ್ಲಾಸ್ಟಿಕ್ ವಸ್ತುಗಳು ಹಾಗೂ ಅನುಪಯುಕ್ತ ಒರಳುಕಲ್ಲು, ಚರಂಡಿ, ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.

ಜೈವಿಕ ವಿಧಾನದಲ್ಲಿ ಮೀನುಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಗಪ್ಪಿ ಮತ್ತು ಗ್ಯಾಂಬೋಜಿಯ ಲಾರ್ವ ಹಾನಿ ಮೀನುಗಳನ್ನು ಪಡೆದುಕೊಂಡು ಕನಿಷ್ಠ ಪಕ್ಷ 6 ತಿಂಗಳು ನೀರು ನಿಲ್ಲುವ ಕೆರೆ, ಕುಂಟ್ಟೆ, ಬಾವಿ, ಕಲ್ಯಾಣಿಗಳಲ್ಲಿ ಬಿಡಲಾಗುವುದು ಈ ಮೀನುಗಳು ಆಹಾರಕ್ಕಾಗಿ ಸೊಳ್ಳೆ ಮೊಟ್ಟೆ ಮತ್ತು ಲಾರ್ವಗಳನ್ನು ತಿನ್ನುತ್ತವೆ. ಜಿಲ್ಲೆಯ ಎಲ್ಲಾ ಆರೋಗ್ಯಸಂಸ್ಥೆಗಳಲ್ಲಿ ಸಿಮೆಂಟ್ ತೊಟ್ಟಿ ನಿರ್ಮಿಸಿ ಗಪ್ಪಿ ಮತ್ತು ಗ್ಯಾಂಬೋಜಿಯ ಮೀನುಗಳನ್ನು ಸಾಕಾಣೆ ಮಾಡುತ್ತಿದ್ದು ಅವಶ್ಯಕತೆಯಿರುವ ಕಡೆ ಬಿಡಲಾಗುತ್ತಿದೆ. ರಾಸಾಯನಿಕ ವಿಧಾನದಲ್ಲಿ ಅಬೇಟ್ ಮತ್ತು ಫೈರೆತ್ರಮ್ ಎಂಬ 2 ಬಗೆಯ ರಾಸಾಯನಿಕಗಳನ್ನು ಬಳಸಲಾಗುತ್ತಿದ್ದು ಈಡಿಸ್ ಲಾರ್ವ ಸಮೀಕ್ಷೆ ಮಾಡುವ ವೇಳೆ ಅಬೇಟ್ ದ್ರಾವಣವನ್ನು ಬಳಸಲಾಗುತ್ತದೆ. ಇದರಿಂದ ಸೊಳ್ಳೆ ಮರಿಗಳು ನಾಶವಾಗುತ್ತದೆ. ವಯಸ್ಕ ಸೊಳ್ಳೆಗಳನ್ನು ನಾಶಪಡಿಸಲು ಫೈರೆತ್ರಮ್ ರಾಸಾಯನಿಕ ಬಳಸಿ ಧೂಮೀಕರಣ ಮಾಡಲಾಗುತ್ತದೆ. ಈ ಎಲ್ಲಾ ಮಾಹಿತಿಗಳನ್ನು ತಾವು ಕಾರ್ಯಾಗಾರದಲ್ಲಿ ತಿಳಿದುಕೊಂಡಿದ್ದೀರಿ ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ಈ ಕಾರ್ಯಾಗಾರದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶಶಿಕಲಾ, ಡಯಟ್ ಉಪನ್ಯಾಸಕರಾದ ಸುಜಾತ, ರಾಜಶೇಖರ್, ಬಿ.ಆರ್.ಸಿ ಸಾವಿತ್ರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್, ಆರೋಗ್ಯ ಮೇಲ್ವಿಚಾರಕ ರೇಣುಕಯ್ಯ, ಕೀಟ ಶಾಸ್ತ್ರಜ್ಞೆ ಸೌಮ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿನಯ್ ಕುಮಾರ್, ದಾಸಪ್ಪ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಹದೇವಯ್ಯ, ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಿಯಾ, ಡಯಟ್ ಸಿಬ್ಬಂದಿ ಹಾಗೂ ಶಿಕ್ಷಕರು ಹಾಜರಿದ್ದರು.