ಮೈಸೂರು: `ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಸಿಕ್ಕಿದ್ದರೆ ಸಮುದಾಯದ ಎಲ್ಲ ಉಪಪಂಗಡಗಳಿಗೆ ಸೌಲಭ್ಯ ಸಿಗುತ್ತಿತ್ತು. ಸಮುದಾಯದ ಜನಸಂಖ್ಯೆ ಶೇ ೧೭ರಿಂದ ೩೦ರಷ್ಟು ಆಗುತ್ತಿತ್ತು’ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಶುಕ್ರವಾರ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಅಂತರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ ಆಯೋಜಿರುವ ಮೂರು ದಿನಗಳ `ವೀರಶೈವ ಲಿಂಗಾಯತ ಬಿಸಿನೆಸ್ ಕಾಂಕ್ಲೇವ್’ನಲ್ಲಿ ಮಾತನಾಡಿದರು.
`ಮೀಸಲಾತಿ ಕಾರಣಕ್ಕಾಗಿ ಲಿಂಗಾಯತ ಉಪ್ಪಾರ, ಕುಂಬಾರ, ಕುರುಬ, ಹಡಪದ, ಬಣಜಿಗ, ಗಾಣಿಗ, ಸಾದರ, ರೆಡ್ಡಿ ಮೊದಲಾದ ಉಪ ಪಂಗಡಗಳು ಲಿಂಗಾಯತ ಬದಲು ಹಿಂದೂ ಎಂದೇ ಬರೆಸಿವೆ. ಹೀಗಾಗಿ ಜಾತಿಗಣತಿಯಲ್ಲಿ ಸಮುದಾಯದ ಉಪ ಪಂಗಡಗಳು ಹರಿದು ಹಂಚಿಹೋಗಿವೆ’ ಎಂದು ಹೇಳಿದರು.
`೨ `ಎ’ ಮೀಸಲಾತಿಗಾಗಿ ಗಾಣಿಗ ಲಿಂಗಾಯತರು ಹಿಂದೂ ಗಾಣಿಗ ಎಂದೂ, ೩ `ಎ’ ಮೀಸಲಿಗೆ ರೆಡ್ಡಿ ಲಿಂಗಾಯತರು ಹಿಂದೂ ರೆಡ್ಡಿ ಎಂದೇ ಬರೆಸಿದ್ದಾರೆ. ಅದು ತಪ್ಪೆಂದು ಹೇಳಲಾರೆ. ಅವರಿಗೆ ಬೇಕಿರುವುದು ಶೈಕ್ಷಣಿಕ, ಉದ್ಯೋಗ ಮೀಸಲಾತಿ. ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಿಕ್ಕಿದ್ದರೆ ಈ ಎಲ್ಲ ಉಪ ಪಂಗಡಗಳಿಗೂ ನ್ಯಾಯ ಸಿಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.
`ಸ್ವತಂತ್ರ ಧರ್ಮ ಹೋರಾಟವನ್ನು ವಿರೋಧಿಸಿದವರಿಗೆ ಈಗ ಅರ್ಥವಾಗಿದೆ. ವೀರಶೈವ ಮಹಾ ಅಧಿವೇಶನದಲ್ಲಿ ಕಾಶಿ ಸ್ವಾಮೀಜಿ ಅವರಿಗೂ ಇದನ್ನೇ ಹೇಳಿರುವೆ. ಸುತ್ತೂರು, ಸಿದ್ದಗಂಗೆ, ಗದಗ ಸೇರಿದಂತೆ ಎಲ್ಲ ಮಠಗಳ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಿರ್ಣಯ ತೆಗೆದುಕೊಳ್ಳಬೇಕು. ಒಗ್ಗಟ್ಟಾಗಿದ್ದರೆ ಮಾತ್ರ ರಾಜಕೀಯ ಶಕ್ತಿಯಾಗಿ ಉಳಿಯುತ್ತೇವೆ. ಇಲ್ಲದಿದ್ದರೆ ನಿರಾಶರಾಗಿ ಹೋಗುತ್ತೇವೆ’ ಎಂದರು.
`೧೮೭೧ರ ಮೈಸೂರು ರಾಜ್ಯದ ಜನಗಣತಿ ನೋಡಿದರೆ ಸ್ವತಂತ್ರ ಧರ್ಮದ ಇತಿಹಾಸ ಗೊತ್ತಾಗುತ್ತದೆ. ಹಿಂದೆ ಮಾಡಿದ ತಪುö್ಪಗಳನ್ನು ಮಾಡಬಾರದು’ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, `ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುವ ರಾಜಕೀಯ ಷಡ್ಯಂತ್ರ ನಡೆದಿತ್ತು. ಆಗ, ಶಾಮನೂರು ಶಿವಶಂಕರಪ್ಪ ದನಿ ಎತ್ತಿದ್ದರು. ಇದೀಗ ಜಾತಿಗಣತಿ ರಾಜಕೀಯ ಪಗಡೆ ವಿರುದ್ಧ ಎಂ.ಬಿ.ಪಾಟೀಲ ಮಾತನಾಡಿದ್ದಾರೆ’ ಎಂದು ಶ್ಲಾಘಿಸಿದರು.
ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ (ಎನ್‌ಜಿಟಿ) ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸುಭಾಷ ಬಿ. ಆಡಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಶಾಸಕರಾದ ಟಿ.ಎಸ್.ಶ್ರೀವತ್ಸ, ಎಚ್.ಎಂ.ಗಣೇಶ್ ಪ್ರಸಾದ್, ಫೆಡರೇಶನ್ ಆಫ್ ಇಂಡಸ್ಟ್ರೀಸ್ ಆಫ್ ಇಂಡಿಯಾ ಮುಖ್ಯಸ್ಥ ಬಾಮಚಂದ್ರರಾವ್ ರಾಣೆ, ಆದರ್ಶ್ ಗ್ರೂಪ್ ಮುಖ್ಯಸ್ಥ ಬಿ.ಎಂ.ಜಯಶoಕರ್, ಐಎಲ್‌ವೈಎಫ್ ಮುಖ್ಯಸ್ಥ ಸಂತೋಷ್ ಕೆಂಚಾoಬ, ಮೈಸೂರು ಕಾಂಕ್ಲೇವ್ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಪಾಲ್ಗೊಂಡಿದ್ದರು.