ವರದಿ:ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ನಾನು ಕಂಕಣ ಬದ್ದನಾಗಿ ಕೆಲಸ ಮಾಡಲಿದ್ದು ಈ ನಿಟ್ಟಿನಲ್ಲಿ ಸರ್ಕಾರದಿಂದ ಹೆಚ್ಚು ಅನುದಾನ ತಂದು ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಹುಣಸೂರು ರಸ್ತೆಯಲ್ಲಿರುವ ರೇಷ್ಮೆ ಹುಳು ಬೀಜ ಉತ್ಪಾದನಾ ಕೇಂದ್ರ ಆವರಣದ ರಸ್ತೆ
ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಮತದಾರರ ಆಶಯಕ್ಕೆ ಸ್ಪಂದಿಸಿ
ಅವರ ಕೆಲಸ ಮಾಡುವುದೇ ನನ್ನ ಪ್ರಮುಖ ಗುರಿ ಎಂದರು.
ಈವರೆಗೆ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ಅಭಿವೃದ್ದಿಗೆ ೫೦೦ ಕೋಟಿ ರೂ ಅನುದಾನ ತಂದಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಹಣ ಬಿಡುಗಡೆ ಮಾಡಿಸಿ ಆದ್ಯತೆಯ ಮೇರೆಗೆ ಮೂಲಭೂತ ಸವಲತ್ತು ಕಲ್ಪಿಸುವುದಾಗಿ ಭರವಸೆ ನೀಡಿದ ಶಾಸಕರು ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸಿದರೆ ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡಬಹುದು ಎಂದು ತಿಳಿಸಿದರು.
೩೦ ಲಕ್ಷ ರೂಗಳ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಂಡಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಸರ್ಕಾರಿ ಕಛೇರಿಗಳನ್ನು ಮೇಲ್ದರ್ಜೆಗೇರಿಸಿ ಅಲ್ಲಿಗೆ ಬರುವ ಸಾರ್ವಜನಿಕರಿಗೆ ಸವಲತ್ತು ಕಲ್ಪಿಸಿ ಅದರೊಂದಿಗೆ ಕೆಲಸಗಳು ವೇಗವಾಗಿ ನಡೆಯುವಂತೆ ಮಾಡಲು ನಾನು ನಿರ್ಧಾರ ಮಾಡಿದ್ದು ಇದಕ್ಕೆ ಕೈ ಜೋಡಿಸಿ ನಾಗರೀಕರಿಗೆ ಅನುಕೂಲ ದೊರಕಿಸಬೇಕೆಂದರು.
ಪುರಸಭೆ ಅಧ್ಯಕ್ಷ ಶಿವುನಾಯಕ್, ಸದಸ್ಯರಾದ ಕೆ.ಜಿ.ಸುಬ್ರಮಣ್ಯ, ಶಂಕರಸ್ವಾಮಿ, ಸೌಮ್ಯಲೋಕೇಶ್, ಮಾಜಿ ಸದಸ್ಯ ಕೆ.ವಿನಯ್, ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್, ಮಾಜಿ ಸದಸ್ಯ ಮಹದೇವ್, ಮುಖಂಡರಾದ ಕೆಂಚಿಮoಜು, ಗೌತಮ್‌ಜಾಧವ್, ಕೃಷ್ಣೇಗೌಡ, ಕೆ.ಹೆಚ್.ಬುಡಿಗೌಡ, ಮುತ್ತುರಾಜ್, ಗುತ್ತಿಗೆದಾರರಾದ
ಬ್ಯಾಡರಹಳ್ಳಿಮುರುಳಿ, ಅರಕೆರೆಶರತ್, ಲೋಕೋಪಯೋಗಿ ಇಲಾಖೆಯ ಎಇಇ ಸುಮಿತ, ಇಂಜಿನಿಯರ್‌ಗಳಾದ ಶಿವಲೀಲಾ, ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.