ಮೈಸೂರು: ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಜನವರಿ 26 ರಂದು ದೇಶಾದ್ಯಂತ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಕರೆ ನೀಡಲಾಗಿದೆ. ಅದರಂತೆ ರಾಜ್ಯದಲ್ಲಿಯೂ ತಾಲ್ಲೂಕು ಜಿಲ್ಲಾ ಮಟ್ಟದಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುರುಬೂರು ಶಾಂತಕುಮಾರ್, ದೆಹಲಿ ಗಡಿಯಲ್ಲಿ ದೇಶದ ರೈತರ ಹಿತಕ್ಕಾಗಿ ಹೋರಾಡುತ್ತಿದ್ದ ದಲೈವಾಲಾ 53 ದಿನಗಳ ಉಪವಾಸ ಕೈ ಬಿಟ್ಟು ವೈದ್ಯಕೀಯ ಚಿಕಿತ್ಸೆಗೆ ಒಪ್ಪಿಗೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ದೇಶದ ರೈತರೆಲ್ಲ ಅವರ ಪ್ರಾಣದ ಬಗ್ಗೆ ಆತಂಕಗೊಂಡಿದ್ದರು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ, ಕಾನೂನು ಜಾರಿಗಾಗಿ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚ ರಾಜಕೀಯೆತರ ಸಂಘಟನೆ ರಾಷ್ಟ್ರೀಯ ಸಂಚಾಲಕ ಜಗಜಿತ್ ಸಿಂಗ್ ಧಲೈವಾಲಾ 53 ದಿನದ ಉಪವಾಸ ಸತ್ಯಾಗ್ರಹ ನಿಲ್ಲಿಸಿ ವೈದ್ಯಕೀಯ ಚಿಕಿತ್ಸೆಗೆ ಸಮ್ಮತಿ ಸೂಚಿಸಿದ್ದಾರೆ. ಆದರೆ ಬೇಡಿಕೆ ಈಡೆರುವ ತನಕ ಚಳುವಳಿ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಹಾಗೂ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು ಅಧಿಕಾರಿಗಳ ತಂಡ ಚಳುವಳಿ ನಡೆಯುತ್ತಿರುವ ಕನೋರಿ ಬಾರ್ಡರ್ ಗೆ ಮೂರು ದಿನಗಳ ಹಿಂದೆ ಭೇಟಿ ನೀಡಿದ್ದರು. ಫೆಬ್ರವರಿ 14 ರಂದು ಚಂಡಿಗಢದಲ್ಲಿ ರೈತರ ಸಮಸ್ಯೆಗಳಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆಯ ಕೇಂದ್ರ ಸರ್ಕಾರದ ಲಿಖಿತ ಪತ್ರ ನೀಡಿ 3 ಗಂಟೆಗಳ ಕಾಲ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಗಿದೆ. ಉಪವಾಸನಿರತ ದಲೈವಾಲಾ ನಿರ್ಧಾರ ರೈತರ ಹೋರಾಟದ ಶಕ್ತಿ ಹೆಚ್ಚಿಸಿದೆ. ಕಳೆದ ಮೂರು ದಿನಗಳಿಂದ 124 ರೈತರು ದಲೈವಾಲಾ ಉಪವಾಸ ಬೆಂಬಲಿಸಿ ನಾವು ಪ್ರಾಣ ತ್ಯಾಗಕ್ಕೆ ಸಿದ್ದ ಎಂದು ಉಪವಾಸ ಆರಂಭಿಸಿದರು. ಅವರು ಸಹ ಉಪವಾಸವನ್ನು ನಿನ್ನೆಯಿಂದ ಕೈಬಿಟ್ಟಿದ್ದಾರೆ. ಆದರೆ ಸಮಸ್ಯೆ ಬಗೆಹರಿಯುವ ತನಕ ಹೋರಾಟ ಮುಂದುವರಿಯುತ್ತದೆ. ಜನವರಿ 26 ರಂದು ದೇಶಾದ್ಯಂತ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಕರೆ ನೀಡಲಾಗಿದೆ. ಅದರಂತೆ ರಾಜ್ಯದಲ್ಲಿಯೂ ತಾಲೂಕು ಜಿಲ್ಲಾ ಮಟ್ಟದಲ್ಲಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸಲಾಗುವುದು ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.
ವಿಶ್ವಕಪ್ ಖೋ ಖೋ ಪಂದ್ಯದಲ್ಲಿ ವಿಶ್ವ ಕಪ್ ಗೆದ್ದು ಜಯಭೇರಿ ಬಾರಿಸಿದ ಪುರುಷ ಮಹಿಳೆಯರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಮಹಿಳೆಯರ ಭಾರತ ತಂಡದಲ್ಲಿ ಉತ್ತಮ ಆಟ ಆಡುವ ಮೂಲಕ ಪ್ರಶಸ್ತಿಗೆ ಭಾಜನರಾಗಿರುವ ನಮ್ಮ ರಾಜ್ಯದ ಹಿರಿಮೆ ಹೆಚ್ಚಿಸಿದ ನಮ್ಮ ಊರಿನ ಕು ಚೈತ್ರಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯ ಸರ್ಕಾರ ಅಭಿನಂದನೆ ಹೇಳಿದರೆ ಸಾಲದು. ಇಂಥಹ ಕ್ರೀಡಾಪಟುಗಳಿಗೆ ವಿಶೇಷ ಪ್ರೋತ್ಸಾಹ ನೀಡಲು ಮುಂದಾಗಬೇಕು. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಅಲ್ಲಿನ ಕ್ರೀಡಾಪಟುಗೆ 3 ಕೋಟಿ ರೂಪಾಯಿ ಪ್ರೋತ್ಸಾಹ ಧನ ನೀಡುವ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸುತ್ತೇನೆ. ಟಿ ನರಸೀಪುರ ತಾಲೂಕಿನ ಸರ್ವ ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ನಾಳೆ ಕು ಚೈತ್ರಳನ್ನು ಅಭೂತಪೂರ್ವ ಸ್ವಾಗತ ನೀಡಿ ಅಭಿನಂದನಾ ಸಮಾರಂಭ ನಡೆಸಲಾಗುತ್ತಿದೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ದೇವನೂರು ವಿಜಯೇಂದ್ರ ಸಾತಗಳ್ಳಿ ಬಸವರಾಜು, ಹಳ್ಳಿಕೆರೆಹುಂಡಿ ಪ್ರಭುಸ್ವಾಮಿ, ಕುರುಬೂರ್ ಪ್ರದೀಪ್, ವಾಜಮಂಗಲ ನಾಗೇಂದ್ರ ಇದ್ದರು.