ಬೆಂಗಳೂರು : ಗರ್ಭಿಣಿಯರ ಸುರಕ್ಷತೆ ದೃಷ್ಟಿಯಿಂದ ಮಾತೃತ್ವ ಸುರಕ್ಷತಾ ಅಭಿಯಾನವನ್ನು ನಡೆಸಲು ರಾಜ್ಯ ಸರಕಾರ ಮುಂದಾಗಿದ್ದು, ಪ್ರತಿ ತಿಂಗಳು 9 ಹಾಗೂ 24ನೆ ತಾರಿಖಿನಂದು ಎರಡು ಬಾರಿ ಗರ್ಭಿಣಿಯರ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ನಾಳೆ(ಜ.22) ರಾಯಚೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಗರ್ಭಿಣಿಯರಿಗಾಗಿಯೇ ಆಯೋಜಿಸಿರುವ ಬೃಹತ್ ಉಚಿತ ಆರೋಗ್ಯ ಶಿಬಿರದ ಮೂಲಕ ಉಚಿತ ಆರೋಗ್ಯ ತಪಾಸಣೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದಿದ್ದಾರೆ.
ಮಾತೃತ್ವ ಸುರಕ್ಷಾ ಅಭಿಯಾನದಲ್ಲಿ ಗರ್ಭಿಣಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕ್ರಮ ವಹಿಸುತ್ತಿದೆ. ಅಭಿಯಾನದ ಮೂಲಕ ಗುಣಾತ್ಮಕ ಹೆರಿಗೆ ಸೇವೆಗಳನ್ನ ಒದಗಿಸಲಾಗುವುದು. ಪ್ರತಿ ಗರ್ಭಿಣಿ ಮಹಿಳೆಗೆ ಜನನ ಯೋಜನೆಯನ್ನು ಮುಂಚಿತವಾಗಿಯೇ ಖಚಿತಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಗರ್ಭಧಾರಣೆಯ 3 ತಿಂಗಳ ಮೊದಲು ಮತ್ತು ಗರ್ಭಧಾರಣೆಯ 1ನೆ ತ್ರೈಮಾಸಿಕದಲ್ಲಿ ಪೋಲಿಕ್ ಆಮ್ಲ ಮಾತ್ರೆಗಳನ್ನು ನೀಡಲಾಗುತ್ತಿದೆ. 500 ಎಂಸಿಜಿ ಕ್ಯಾಲ್ಸಿಯಂ ಅನ್ನು ಗರ್ಭಧಾರಣೆಯ 14ನೆ ವಾರದಿಂದ ಹೆರಿಗೆ ಮತ್ತು 6 ತಿಂಗಳ ನಂತರದ ಅವಧಿಯವರೆಗೆ ನೀಡಲಾಗುತ್ತಿದೆ. 3ನೆ ತ್ರೈಮಾಸಿಕ ಪಿಡಬ್ಲ್ಯೂಗಳ ಲೈನ್ ಪಟ್ಟಿ ಮಾಡಲಾಗುತ್ತಿದೆ. ಓರಲ್ ಗ್ರೂಕೋಸ್ ಟಾಲರೆನ್ಸ್ ಟೆಸ್ಟ್ ಬಳಸಿಕೊಂಡು ಗರ್ಭಾವಸ್ಥೆಯ ಮಧುಮೇಹ ಮೆಲ್ಲಿಟಸ್‍ಗಾಗಿ ಪ್ರತಿ ಗರ್ಭಿಣಿಯ ಕಡ್ಡಾಯ ತಪಾಸಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.