ಬೆಂಗಳೂರು : ಮುಡಾದಲ್ಲಿ (ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ) ನಡೆದಿರುವ ಅಕ್ರಮದ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಈಡಿ), ೬೩೧ ನಿವೇಶನದ ವಿವರ ನೀಡುವಂತೆ ಮುಡಾ ಆಯುಕ್ತರಿಗೆ ಪತ್ರದ ಮೂಲಕ ಉಲ್ಲೇಖಿಸಿದೆ.
ಪಿಎಂಎಲ್‌ಎ ೨೦೦೨ರ ಸೆಕ್ಷನ್ ೨೪ರ ಅಡಿ ಈ ಪತ್ರ ನೀಡಲಾಗಿದ್ದು, ಇಲ್ಲಿನ ಮೈಸೂರು ನಗರದ ಶ್ರೀರಾಪುರ, ವಿಜಯನಗರ, ರಾಮಕೃಷ್ಣ ನಗರ, ಆಲನಹಳ್ಳಿ, ಬೋಗಾದಿ, ದೇವನೂರು, ಹಂಚಾ ಸಾತಗಳ್ಳಿ, ಹೆಬ್ಬಾಳ್ ಸೇರಿದಂತೆ ಸುಮಾರು ೬೩೧ ನಿವೇಶನಗಳ ವಿವರವನ್ನು ಹಂಚಿಕೊಳ್ಳುವಂತೆ ಈಡಿ ಪತ್ರದಲ್ಲಿ ತಿಳಿಸಿದೆ. ಪ್ರಮುಖವಾಗಿ ನಿವೇಶನದ ಮಾಲಕತ್ವ, ವಿಳಾಸಗಳನ್ನು ಸಲ್ಲಿಸಬೇಕು. ಅದೇ ರೀತಿ, ಹಂಚಿಕೆಗೆ ಇರುವ ಮಾನದಂಡ, ಹಂಚಿಕೆ ಆಗಿರುವ ದಿನಾಂಕ, ಹಂಚಿಕೆಯ ಗಾತ್ರ, ಹಂಚಿಕೆ ಮಾಡಿರುವ ಭೂಮಿಯ ವಿವರಗಳು, ಗ್ರಾಮಗಳು, ಉತ್ತೇಜಿತ ನಿವೇಶನದ ಸಂದರ್ಭದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯ ಸರ್ವೆ ಸಂಖ್ಯೆ ವಿಸ್ತೀರ್ಣವನ್ನು ಸಹ ಉಲ್ಲೇಖಿಸಬಹುದು ಎಂದು ಹೇಳಿದೆ.