Saturday, April 19, 2025
Google search engine

Homeರಾಜ್ಯಸುದ್ದಿಜಾಲಭಾಷೆಗಳ ಸಮನ್ವಯತೆ, ಸಂಸ್ಕೃತಿ ತಿಳುವಳಿಕೆಯ ಜಾಗೃತಿ ಮೂಡಿಸುವುದೇ ಭಾರತೀಯ ಸಾಹಿತ್ಯ ಪರಿಷತ್ತಿನ ದೃಷ್ಟಿ: ಡಾ.ವಿ. ರಂಗನಾಥ್

ಭಾಷೆಗಳ ಸಮನ್ವಯತೆ, ಸಂಸ್ಕೃತಿ ತಿಳುವಳಿಕೆಯ ಜಾಗೃತಿ ಮೂಡಿಸುವುದೇ ಭಾರತೀಯ ಸಾಹಿತ್ಯ ಪರಿಷತ್ತಿನ ದೃಷ್ಟಿ: ಡಾ.ವಿ. ರಂಗನಾಥ್

ಚಾಮರಾಜನಗರ : ಭಾರತೀಯ ಭಾಷೆಗಳ ಸಮನ್ವಯತೆ ಹಾಗೂ ಎಲ್ಲ ಭಾಷೆಗಳ ವಿಶೇಷ ಕೊಡುಗೆ ಮತ್ತು ಸಂಸ್ಕೃತಿ ತಿಳುವಳಿಕೆಯ ಜಾಗೃತಿ ಮೂಡಿಸುವುದೇ ಭಾರತೀಯ ಸಾಹಿತ್ಯ ಪರಿಷತ್ತಿನ ದೃಷ್ಟಿಯಾಗಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಾಂತ್ಯ ಸಂಪರ್ಕ ಪ್ರಮುಖರಾದ ಮೈಸೂರಿನ ಡಾ.ವಿ. ರಂಗನಾಥ್ ರವರು ತಿಳಿಸಿದರು.

ಅವರು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಚಾಮರಾಜನಗರ ಜಿಲ್ಲಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮ ದಿನಾಚರಣೆಯಲ್ಲಿ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾರತೀಯ ಸಾಹಿತ್ಯ ಅಪಾರ ಪ್ರಭಾವವನ್ನು ಬೀರಿತು . ಸಾಹಿತ್ಯಕ್ಕೆ ಅಪಾರ ಶಕ್ತಿ ಇದ್ದು, ಸತ್ಯವನ್ನು ಜಾಗೃತಗೊಳಿಸಿ ಅರಿವನ್ನುಂಟು ಮಾಡಿ ಸತ್ಕಾರ್ಯದಲ್ಲಿ ಪಾಲ್ಗೊಳ್ಳಲು ಸಾಹಿತ್ಯ ಅಪಾರವಾಗಿ ಪ್ರಭಾವ ಬೀರುತ್ತದೆ . ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು, ದೇಶದ ಎಲ್ಲ ರಾಜ್ಯಗಳಲ್ಲಿ ಸ್ಥಾಪನೆಯಾಗಿದ್ದು ಪರಸ್ಪರ ಎಲ್ಲ ಭಾಷೆಗಳ ಉತ್ಕೃಷ್ಟ ಚಿಂತನೆಯನ್ನು ತಿಳಿಯುವ ಮೂಲಕ ರಾಷ್ಟ್ರೀಯ ಏಕತೆ, ಭಾವೈಕ್ಯತೆಯ ಭಾವನೆಯನ್ನು ಮೂಡಿಸುವ ಕಾರ್ಯ ಯುವ ಜನಾಂಗಕ್ಕೆ ಆಗಬೇಕಿದೆ . ಸಾಹಿತ್ಯದ ಮೂಲಕ ಸಂಸ್ಕೃತಿಯ ಮೂಲಕ ರಾಷ್ಟ್ರೀಯ ಪ್ರಜ್ಞೆ ಜಾಗೃತವಾಗಬೇಕು. ಸಾಹಿತ್ಯದ ಅರಿವು ಉಂಟಾದಾಗ ಮನುಷ್ಯ ಪರಿಪೂರ್ಣತೆಗೆ ತಲುಪುತ್ತಾನೆ. ಭಾರತೀಯ ಸಾಹಿತ್ಯ ಪರಿಷತ್ತು ಜಿಲ್ಲಾ, ತಾಲೂಕು ,ಹೋಬಳಿ ಹಾಗೂ ಸಾಹಿತ್ಯಕೂಟಗಳ ಮೂಲಕ ಪ್ರತಿ ಬಡಾವಣೆಗಳಲ್ಲೂ ಜಾಗೃತಿಯಾಗಿ ಮನೆಮನೆಯನ್ನು ತಲುಪಿ ಸಾಹಿತ್ಯದ ಕೊಡುಗೆಯನ್ನು ತಿಳಿಯುವ ಕಾರ್ಯವನ್ನು ಪರಿಷತ್ತಿನ ಮೂಲಕ ನಿರ್ವಹಿಸೋಣ. ಸಾಹಿತ್ಯ ರಚನೆ ಮಾಡುವವರಷ್ಟೇ ಸಾಹಿತಿಗಳಲ್ಲ ಓದುಗರು ,ಕೇಳುಗರು ,ಆಸಕ್ತಿ ವಿರುವ ಎಲ್ಲರೂ ಸಾಹಿತ್ಯದ ಪರಿಚಾರಕರು ಎಂದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಕುರಿತು ಮಾತನಾಡಿದ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ, ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂತಹ ಸರಕಲ್ಲ .ಅದು ನಾವು ಪಡೆದುಕೊಳ್ಳಬೇಕಾದದ್ದು, ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ತಂದುಕೊಡುತ್ತೇನೆ ಎಂಬ ವೀರ ಘ ರ್ಜನೆಯ ಮೂಲಕ ಭಾರತೀಯ ರಾಷ್ಟ್ರೀಯ ಸೈನ್ಯವನ್ನು ಕಟ್ಟಿ, ಬ್ರಿಟಿಷರ ವಿರುದ್ಧ ಪ್ರಬಲವಾಗಿ ವಿದೇಶಿಯ ನೆಲದ ಮೂಲಕ ಹೋರಾಟ ನಡೆಸಿದ ನೇತಾಜಿಯವರ ಧೈರ್ಯ ,ಸಾಹಸ ಮರೆಯಲಾಗದು. ಕ್ಷಾತ್ರವೀರ್ಯ ತೇಜಸ್ಸಿನ ಸುಭಾಷ್ ರವರು ಐಸಿಎಸ್ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಅತ್ಯುನ್ನತ ಪದವಿಯನ್ನು ಅಲಂಕರಿಸಬಹುದಾಗಿದ್ದರು ಅದನ್ನು ತಿರಸ್ಕರಿಸಿ ಭಾರತಮಾತೆಯ ಸಂಕೋಲೆಯನ್ನು ಬಿಡಿಸಲು ವೀರ ಸ್ವಾತಂತ್ರ ಹೋರಾಟಗಾರರಾಗಿ ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಮಹಾನ್ ಶಕ್ತಿ. ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಹೋರಾಟದಲ್ಲಿ ಆಧ್ಯಾತ್ಮಿಕ ಶಕ್ತಿಯ ಪ್ರಭಾವವನ್ನು ನಾವು ಕಾಣಬಹುದು. ಸ್ವಾಮಿ ಪರಮಹಂಸರು ,ತಾಯಿ ಶಾರದಾ ಮಾತೆ, ಸ್ವಾಮಿ ವಿವೇಕಾನಂದ, ರವೀಂದ್ರನಾಥ ಟ್ಯಾಗೋರ್, ಚಿತ್ತರಂಜನ್ ದಾಸ್, ಬಾಬಾ ಅಮರಸಿಂಗ್,ಗ್ಯಾನಿ ಪ್ರೀತಂ ಸಿಂಗ್ ಹಾಗೂ ವೇಣಿ ಮಾಧವ ದಾಸ್ ರವರ ಪ್ರಭಾವಕ್ಕೆ ಒಳಗಾಗಿದ್ದ ಸುಭಾಷ್ ಚಂದ್ರ ಬೋಸ್ ರವರ ಹೋರಾಟ ಅವರ ಮಾತುಗಳಲ್ಲಿ ಕಾಣಬಹುದು. ಸಾಹಸವಿಲ್ಲದ ಆದರ್ಶ ಜೀವನ,ಜೀವನವೇ ಅಲ್ಲ ಎಂದು ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷ ಪದವಿಯನ್ನು ತಿರಸ್ಕರಿಸಿ, ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮದೇ ಆದ ಆಜಾದ್ ಹಿಂದ್ ಸೇನೆಯನ್ನು ಕಟ್ಟಿದವರು. ಜಾವ, ಮಲಯ, ಸಿಂಗಾಪುರ್, ಅಂಡಮಾನ್ ನಿಕೋಬಾರ್, ಬರ್ಮಾ ,ಬಾಂಗ್ಲಾ ಮೂಲಕ ಹೋರಾಟದ ದಿಕ್ಕನ್ನು ಬದಲಾಯಿಸಿದವರು. ಅಂಡಮಾನ್ ನಿಕೋಬಾರ್ ನಲ್ಲಿ ಮೊಟ್ಟಮೊದಲಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದವರು ನೇತಾಜಿ. ಬ್ರಿಟಿಷ್ ಪ್ರಧಾನಿ ಅಟ್ಲಿಯವರು ತಮ್ಮ ಮಾತುಗಳಲ್ಲಿ ನೇತಾಜಿ ಅವರ ಕೊಡುಗೆ ಭಾರತೀಯ ರಾಷ್ಟ್ರೀಯ ಸೇನೆ ಹಾಗೂ ನೌಕಾದಳದಲ್ಲಿ ಪ್ರಭಾವ ಬೀರಿ ಬ್ರಿಟಿಷರು ಸ್ವಾತಂತ್ರ ನೀಡುವಲ್ಲಿ ನೇತಾಜಿ ಅವರ ಪ್ರಭಾವವೇ ಹೆಚ್ಚು ಎಂದು ತಿಳಿಸಿರುವುದನ್ನು ನಾವು ತಿಳಿಯಬಹುದು. ಭಾರತದ ನೂತನ ಇತಿಹಾಸದ ನಿರ್ಮಾತೃ , ಆದರ್ಶ ಮಾನವತಾವಾದಿ ಸುಭಾಷ್ ಚಂದ್ರ ಬೋಸ್ .
ಇವರ ಮಹಿಳಾ ಸೇನೆ ಏಷ್ಯಾ ಖಂಡದಲೇ ಮೊದಲ ಮಹಿಳಾ ಸಂಘಟನೆ . ರಾಷ್ಟ್ರ ವೀರವನಿತೆ ಜಾನ್ಸಿ ರಾಣಿ ಲಕ್ಷ್ಮೀಬಾಯಿ ರವರ ಹೆಸರಿನಲ್ಲಿ ಜಾನ್ಸಿ ರೆಜಿಮೆಂಟ್ ಸ್ಥಾಪಿಸುವ ಮೂಲಕ ಮಹಿಳೆಯರಲ್ಲೂ ರಾಷ್ಟ್ರೀಯ ಹೋರಾಟದ ಕಿಚ್ಚನ್ನು ಹಚ್ಚಿದವರು ನೇತಾಜಿ. ಭಾರತದ ರಾಷ್ಟ್ರ ಮಂತ್ರವಾದ ಹಾಗೂ ಘೋಷಣೆಯಾದ ಜೈ ಹಿಂದ್ ಘೋಷಣೆ ನೇತಾಜಿ ಅವರ ಕೊಡುಗೆ ಎಂದು ಬಣ್ಣಿಸಿ, ಇತಿಹಾಸ ಅವರಿಗೆ ಮತ್ತಷ್ಟು ಗೌರವವನ್ನು ನೀಡಬೇಕು . ಸಮಾಜ ಸರ್ಕಾರಗಳು ವ್ಯಾಪಕವಾಗಿ ನೇತಾಜಿಯವರ ರಾಷ್ಟ್ರ ಪ್ರೇಮ, ರಾಷ್ಟ್ರಭಕ್ತಿ,ರಾಷ್ಟ್ರ ಚಿಂತನೆ ಮತ್ತು ಸೈನಿಕ ವ್ಯವಸ್ಥೆಯ ಶ್ರೇಷ್ಠ ಅಂಶಗಳನ್ನು ಮನವರಿಕೆ ಮಾಡುವ ದಿಕ್ಕಿನಲ್ಲಿ ಯುವ ಜನಾಂಗಕ್ಕೆ ನೇತಾಜಿ ಯುವ ಕಾರ್ಯಪಡೆಯನ್ನೇ ನಿರ್ಮಿಸಲು ಕಾರ್ಯಯೋಜನೆ ಮಾಡಬೇಕೆಂದು ಅಭಿಪ್ರಾಯಪಟ್ಟರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಮೂಲಕ ಪ್ರತಿ ತಿಂಗಳಿಗೆ ಎರಡು ಕಾರ್ಯಕ್ರಮಗಳನ್ನು ರೂಪಿಸಿ ರಾಷ್ಟ್ರೀಯ ಮೌಲ್ಯ ಸೇವೆ, ತ್ಯಾಗ, ಸಂಸ್ಕೃತಿ, ಪರಂಪರೆ ಮತ್ತು ಸಾಹಿತ್ಯದ ಮೌಲ್ಯಗಳನ್ನು ಸಾರುವ ದಿಕ್ಕಿನಲ್ಲಿ ಉತ್ತಮ ಸಂಘಟನೆಯನ್ನು ನಿರ್ಮಿಸುವ ಮೂಲಕ ಸದೃಢ ಸಮಾಜಕ್ಕೆ ಅರ್ಪಣೆ ಮಾಡಿಕೊಳ್ಳುವ ಮಾನಸಿಕತೆಯನ್ನು ಬೆಳೆಸಿಕೊಳ್ಳುವ ಕಾರ್ಯವನ್ನು ಎಲ್ಲರೂ ಸೇರಿ ಮಾಡೋಣ ಎಂದು ತಿಳಿಸಿದರು.

ದಿವ್ಯ ಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿಕೆ ದಾನೇಶ್ವರಿ ಅಕ್ಕ ರವರು ವಹಿಸಿ ಮಾತನಾಡುತ್ತಾ ಸ್ವಾತಂತ್ರ್ಯ ಚಳುವಳಿ ನಮಗೆ ಅಪಾರವಾದ ಮಹಾತ್ಮರಗಳನ್ನು ನೀಡಿದೆ . ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಕೊಡುಗೆಯನ್ನು ನಾವೆಲ್ಲರೂ ಬಾಲ್ಯದಿಂದಲೂ ಅರಿತಿದ್ದೇವೆ. ನೇತಾಜಿ ಎಂದರೆ ಮನಸ್ಸಿಗೆ ಹೊಸ ಆತ್ಮವಿಶ್ವಾಸವನ್ನು, ಗೌರವವನ್ನು, ಧೈರ್ಯವನ್ನು, ಸಾಹಸವನ್ನು ಹುಟ್ಟುಹಾಕುತ್ತದೆ .ನೇತಾಜಿಯ ಹೆಸರೇ ಮನುಷ್ಯನನ್ನು ಬಲಗೊಳ್ಳುವಂತೆ ಮಾಡುತ್ತದೆ. ಅಂತಹ ರಾಷ್ಟ್ರ ವೀರರನ್ನು ಪಡೆದ ಭಾರತ ಮಾತೆ ಸದಾ ಕಾಲ ಧನ್ಯರಾಗಿದ್ದಾಳೆ .ಬ್ರಿಟಿಷರ ವಿರುದ್ಧ ಕೆಚ್ಚೆದೆಯ ಹೋರಾಟವನ್ನು ನಿರ್ವಹಿಸಿ ಭಾರತದ ಸ್ವಾತಂತ್ರ್ಯಕ್ಕೆ ಅವರದೇ ಆದ ಕೊಡುಗೆಯನ್ನು ನೀಡಿರುವುದು ಹೆಮ್ಮೆಯ ವಿಷಯ. ಭಾರತದ ಹೆಮ್ಮೆ ಪ್ರತೀಕ.ನೇತಾಜಿ. ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಚಾಮರಾಜನಗರದ ಐ ಎನ್ ಎ ರಾಮರಾವ್ ರವರು ಸೇವೆ ಮರೆಯಲಾಗದು. ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ರವರ ದಿವ್ಯ ಚೇತನಗಳು ನಮ್ಮೆಲ್ಲರಲ್ಲಿಯೂ ಮತ್ತಷ್ಟು ಶಕ್ತಿಯನ್ನು ನೀಡಲಿ. ಸಮಾಜಕ್ಕೆ ಆಧ್ಯಾತ್ಮ ಮುಖ್ಯವಾಗಿದ್ದು ,ಮನುಷ್ಯ ಆಧ್ಯಾತ್ಮಿಕತೆಯ ರಹಸ್ಯವನ್ನು ತಿಳಿಯುವ ಮೂಲಕ ಧೈರ್ಯ ಸಾಹಸದ ಜೀವನವನ್ನು ನಡೆಸಬೇಕು ಎಂದು ತಿಳಿಸಿದರು.

ನೂತನ ಪದಾಧಿಕಾರಿಗಳ ಪರಿಚಯವನ್ನು ಹಾಗೂ ಘೋಷಣೆಯನ್ನು ಡಾ. ರಂಗನಾಥ್ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಬಿಕೆ ಆರಾಧ್ಯ,ಸುದರ್ಶನ್. ವಿ ,ವಿಶಾಲಾಕ್ಷಿ ಹರದನಹಳ್ಳಿ, ಗಾಯತ್ರಿ ಚಂದ್ರಶೇಖರ್, ಲೋಕೇಶ್. ಡಿ, ಪರಮೇಶ್ವರಪ್ಪ ,ಸುರೇಶ್ ದೊಡ್ಡ . ಮೋಳೆ,ಉಪನ್ಯಾಸಕ ಸುರೇಶ್, ಪದ್ಮಾಕ್ಷಿ ,ಸತೀಶ್ , ಮನೋಜ್, ಪೂರ್ಣ ಶ್ರೀ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular