ಮಂಗಳೂರು (ದಕ್ಷಿಣ ಕನ್ನಡ):ಮೈಕ್ರೋ ಫೈನಾನ್ಸ್‌ಗಳನ್ನು ನಿರ್ಬಂಧಿಸುವುದಕ್ಕೆ ಸೂಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಮತ್ತು ಸೇವಾ ಟ್ರಸ್ಟ್ ಮಂಗಳೂರಲ್ಲಿ ಒತ್ತಾಯಿಸಿದೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಮೈಕ್ರೋ ಫೈನಾನ್ಸ್ ಕಂಪೆನಿಗಳನ್ನು ನಿರ್ಬಂಧಿಸಲು ಆಂಧ್ರ ಪ್ರದೇಶ ಸರಕಾರ ಕಾನೂನು ಜಾರಿ ಮಾಡಿದೆ. ಅದನ್ನೇ ಮಾದರಿಯಾಗಿಟ್ಟು ಅದಕ್ಕಿಂತಲೂ ಪರಿಣಾಮಕಾರಿ, ವೈಜ್ಞಾನಿಕವಾದ ಕಾಯ್ದೆ ಕರ್ನಾಟಕದಲ್ಲಿಯೂ ರೂಪಿಸಿ ಜಾರಿಗೊಳಿಸಬೇಕು ಎಂದರು. 2019ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ವೇಳೆ ಮಂಡನೆಯಾಗಿ ರಾಜ್ಯಪಾಲರ ಅಂಗೀ ಕಾರ ಪಡೆದುಕೊಂಡಿದ್ದ ಋಣಮಕ್ತ ಕಾಯ್ದೆಗೆ ಇರುವ ತಡೆಯಾಜ್ಞೆ ತೆರವಿಗೆ ಕ್ರಮ ಕೈಗೊಳ್ಳಬೇಕು.
ಸಂಸತ್ತಿನಲ್ಲಿ 2013ರಲ್ಲಿ ಮಂಡನೆಯಾದ ಖಾಸಗಿ ಮಸೂದೆಯನ್ನು ಅಂಗೀಕರಿಸಬೇಕು. ಇದುವರೆಗೆ ನೀಡಿರುವ ಕಿರುಸಾಲಗಳನ್ನು ಮನ್ನಾ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು ಆಧಾರ್ ಕಾರ್ಡ್ ಆಧಾರದಲ್ಲಿ 2 ಲಕ್ಷ ರೂ. ಕಿರು ಸಾಲ ಕಡ್ಡಾಯವಾಗಿ ನೀಡುವಂತೆ ಸೂಚಿಸಬೇಕು. ಸಾಲ ವಸೂಲಿಗೆ ಮನೆಗೆ ಬಂದು ಬೆದರಿಸುವುದು, ಅವಮಾನಿಸುವುದು, ಕಿರುಕುಳ ನೀಡುವುದನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದರು.