ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ನಗರದ ಹೊರವಲಯದ ಕೆಸಿರೋಡ್ ನ ಕೋಟೆಕಾರ್ ವ್ಯವಸಾಯ ಸೇವಾ ಬ್ಯಾಂಕ್ ದರೋಡೆ ಪ್ರಕರಣದ ಕುರಿತಂತೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ಇಂದು ತಮ್ಮ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಕುರಿತು ಮಾಹಿತಿ ನೀಡಿದರು.
ಮುಂಬೈಯಲ್ಲಿ ನೆಲೆಸಿರುವ ಮಂಗಳೂರು ಮೂಲದವ ಎನ್ನಲಾಗಿರುವ ಶಶಿ ತೇವರ ಎಂಬಾತ ಆರು ತಿಂಗಳ ಹಿಂದೆ ಕೋಟೆಕಾರ ವ್ಯವಸಾಯ ಸಹಕಾರಿ ಬ್ಯಾಂಕ್‌ನಲ್ಲಿ ಭದ್ರತಾ ಸಿಬ್ಬಂದಿ ಕೊರತೆ ಹಾಗೂ ದರೋಡೆಗೆ ಸೂಕ್ತವಾದ ಬ್ಯಾಂಕ್ ಎಂಬುದನ್ನು ತಿಳಿಸಿದ್ದ. ಅದರಂತೆ 2024ರ ಆಗಸ್ಟ್, ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಮುರುಗಂಡಿ ಮಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾನೆ. ಶುಕ್ರವಾರ ಮಧ್ಯಾಹ್ನ ಸೂಕ್ತ ದಿನವೆಂದು ನಿರ್ಧರಿಸಿ ಜ. 17ರಂದು ದರೋಡೆ ಕೃತ್ಯ ಎಸಗಿದ್ದಾರೆ. ಮೂರು ಮಂದಿ ಮುಂಬೈಯಿಂದ ಕಾರಿನಲ್ಲಿ ಬಂದಿದ್ರೆ ಇಬ್ಬರು ಆರೋಪಿಗಳು ರೈಲಿನಲ್ಲಿ ಆಗಮಿಸಿದ್ದರು. ಕೃತ್ಯ ನಡೆದ ದಿನದಂದು ಮಧ್ಯಾಹ್ನ 12.20ರ ವೇಳೆಗೆ ಸ್ಥಲಕ್ಕೆ ತಲುಪಿದ್ದ ಆರೋಪಿಗಳು, ಅಲ್ಲಿ ಕೆಲ ಹೊತ್ತು ಕಾದು 1.10ರ ವೇಳೆಗೆ ಬ್ಯಾಂಕ್‌ಗೆ ನುಗ್ಗಿ ಕೃತ್ಯ ಎಸಗಿ ಪರಾರಿಯಾಗಿದ್ದರು ಎಂದು ವಿವರಿಸಿದರು.