ಯಳಂದೂರು: ತಾಲೂಕಿನ ಸುಂದರಮ್ಮ ದುಗ್ಗಹಟ್ಟಿ ಪಿ. ವೀರಭದ್ರಪ್ಪ ಪ್ರತಿಷ್ಠಾನದ ವತಿಯಿಂದ ಸುತ್ತೂರಿನಲ್ಲಿ ನಡೆಯುತ್ತಿರುವ ಜಾತ್ರೆಯಲ್ಲಿ ಪ್ರತಿ ವರ್ಷ ಚಾಮರಾಜನಗರ ಜಿಲ್ಲೆಯ ರೈತರಿಗೆ ನೀಡುವ ಪ್ರಶಸ್ತಿಯನ್ನು ನೀಡಲಾಯಿತು.
ಸುತ್ತೂರಿನಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರ ಮಹೋತ್ಸವದ ಅಂಗವಾಗಿ ನಡೆದ ಸುಸ್ಥಿರ ಕೃಷಿಗಾಗಿ ನಿಖರ ಬೇಸಾಯ ಕ್ರಮ ಕುರಿತಾದ ವಿಚಾರ ಸಂಕಿರಣದಲ್ಲಿ ಈ ಪ್ರಶಸ್ತಿಗಳನ್ನು ಕೊಡಲಾಯಿತು. ೨೦೦೪ ರಿಂದ ಈ ಪ್ರಶಸ್ತಿಯನ್ನು ಪ್ರತಿ ವರ್ಷವೂ ಸುತ್ತೂರು ಜಾತ್ರೆಯಲ್ಲಿ ನೀಡುವ ವಾಡಿಕೆ ಇದೆ. ತಾಲೂಕಿನ ದುಗ್ಗಹಟ್ಟಿ ಗ್ರಾಮದ ಸುಂದರಮ್ಮ ದುಗ್ಗಹಟ್ಟಿ ಪಿ. ವೀರಭದ್ರಪ್ಪ ಪ್ರತಿಷ್ಠಾನದ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಅತ್ಯುತ್ತಮ ಸಾಧನೆಗೈದ ರೈತರಿಗೆ ಈ ಪ್ರಶ್ತಿಯನ್ನು ನೀಡಲಾಗುತ್ತದೆ.
ಈ ಬಾರಿ ಬಾಳೆ ಬೆಳೆಯಲ್ಲಿ ಯಳಂದೂರು ತಾಲೂಕಿನ ಮಲಾರಪಾಳ್ಯ ಗ್ರಾಮದ ಸುಧಾಮಣಿ ಹಾಗೂ ಮಲ್ಲಿಗೆಹಳ್ಳಿ ಗ್ರಾಮದ ಪ್ರಭುಸ್ವಾಮಿ, ಮುಸುಕಿನ ಜೋಳದ ಬೆಳೆಯಲ್ಲಿ ಹನೂರು ತಾಲೂಕಿನ ಮಂಗಲ ಗ್ರಾಮದ ಮಂಗಳಮ್ಮ, ಕಂಡಯ್ಯನ ಪಾಳ್ಯದ ಗೋವಿಂದೇಗೌಡ, ಟೊಮ್ಯಾಟೋ ಬೆಳೆಯಲ್ಲಿ ಚಾಮರಾಜನಗರ ತಾಲೂಕಿನ ಬಸವಾಪುರ ಗ್ರಾಮದ ಬಸವಣ್ಣ ನಾಯಕ, ಕಲ್ಪುರ ಗ್ರಾಮದ ಕೆ.ಎ. ರೇವಣ್ಣ , ಕಬ್ಬು ಬೆಳೆಯಲ್ಲಿ ಕೊಳ್ಳೇಗಾಲದ ಬಾಬುಪಾಷ ಹಾಗೂ ಕುಂತೂರು ಗ್ರಾಮದ ರಾಜೇಂದ್ರಪ್ರಸಾದ್, ಪೋಲ್‌ಬೀನ್ಸ್ ಬೆಳೆಗೆ ಗುಂಡ್ಲುಪೇಟೆ ತಾಲೂಕಿನ ಯರಿಯೂರು ಗ್ರಾಮದ ಪ್ರಕಾಶ್, ಮಂಚಹಳ್ಳಿ ಗ್ರಾಮದ ಕಾಳಸ್ವಾಮಿ ಎಂಬುವವರಿಗೆ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ನಗದು ಹಣ, ಪ್ರಶಸ್ತಿ ಫಲಕಗಳನ್ನು ನೀಡಲಾಯಿತು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮಿಗಳು ಪ್ರಶಸ್ತಿ ವಿತರಣೆ ಮಾಡಿದರು. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಜಿ, ಶ್ರೀ ಸೋಮಶೇಖರ ಶಿವಾಚಾರ್ಯಸ್ವಾಮಿಜಿ, ಮಾಜಿ ಸಚಿವ ಬಿ.ಸಿ. ಪಾಟೀಲ್, ಸಿ.ಸಿ. ಪಾಟೀಲ್, ಅರವಿಂದ ಬೆಲ್ಲದ್, ಡಾ. ಕುಮಾರ್ ದುಗ್ಗಹಟ್ಟಿ ಪಿ. ವೀರಭದ್ರಪ್ಪ ಪ್ರತಿಷ್ಠಾನದ ವಿ. ಗಂಗಾಧರಸ್ವಾಮಿ ಸೇರಿದಂತೆ ಅನೇಕರು ಇದ್ದರು.