ಕೆ.ಆರ್.ನಗರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ತರಬೇತಿ ಕೇಂದ್ರ ಆರಂಭ
ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮಹಿಳೆಯರು ಪದವಿ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ತರಬೇತಿ ಕೇಂದ್ರವನ್ನು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಕಾಲೇಜಿನ ೨೦೨೪-೨೫ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ
ಮಾತನಾಡಿದ ಅವರು ತರಬೇತಿ ಕೇಂದ್ರ ಆರಂಭ ಮಾಡುವುದರಿಂದ ಗೃಹಿಣಿಯರು ಸೇರಿದಂತೆ ಕೆಲ ಉದ್ಯೋಗಸ್ಥರು ಪದವಿ ಪಡೆಯಲು ಅನುಕೂಲವಾಗಲಿದೆ ಎಂದರು.
ಕ್ಷೇತ್ರದ ವಿದ್ಯಾರ್ಥಿಗಳಿಗಾಗಿ ಕೆ.ಆರ್.ನಗರ ಪಟ್ಟಣದಲ್ಲಿ ಐಟಿಐ, ನರ್ಸೀಂಗ್ ಮತ್ತು ಕಾನೂನು ಕಾಲೇಜು ಆರಂಭಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಕಾನೂನು ಕಾಲೇಜು ಪ್ರಾರಂಭಿಸಲು ಮುಂಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ ಶಾಸಕರು ನನ್ನ ಅಧಿಕಾರವಧಿಯಲ್ಲಿ ಶಿಕ್ಷಣಕ್ಕೆ ಮತ್ತು ಆರೋಗ್ಯ ಒತ್ತು ಕೊಟ್ಟು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕಾಲೇಜಿನ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಿಸಿಕೊಡುವುದರ ಜತೆಗೆ ಸಾಂಸ್ಕೃತಿಕ ಸಭಾಂಗಣ ನಿರ್ಮಾಣ ಮಾಡಲು ಅಗತ್ಯ ಅನುದಾನ ಮಂಜೂರು ಮಾಡಿಸಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕರು ಕಳೆದ ವರ್ಷ ನೀಡಿದ ಭರವಸೆಯಂತೆ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಿಕೊಡಲಾಗಿದ್ದು, ಶೌಚಾಲಯವನ್ನು ನಿರ್ಮಾಣ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡದ ನವೀಕರಣಕ್ಕಾಗಿ ಹಾಗೂ ಕಾಲೇಜಿಗೆ ಹೈಟೆಕ್ ಸ್ಪರ್ಶ ನೀಡಲು ೫.೨೦ ಕೋಟಿ ರೂ ಬಿಡುಗಡೆ ಮಾಡಿಸಲಾಗಿದ್ದು ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ ಎಂದು ಹೇಳಿದ ಶಾಸಕ ಡಿ.ರವಿಶಂಕರ್ ಮುಂದಿನ ವರ್ಷ ೫೯೦ ಅಂಕ ಗಳಿಸುವ ವಿದ್ಯಾರ್ಥಿನಿಯರಿಗೆ ವೈಯುಕ್ತಿಕವಾಗಿ ಒಂದು ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದರು.

ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಬಹಳ ಪ್ರಮುಖ ಘಟ್ಟವಾಗಿದ್ದು ದೇಶವನ್ನು ಮುನ್ನಡೆಸುವ ಯುವ ಜನರಾದ ನೀವುಗಳು ಜವಬ್ದಾರಿ ಅರಿತು ಶಿಕ್ಷಣ ಪಡೆಯಬೇಕು ಎಂದರಲ್ಲದೆ ಶಿಕ್ಷಣ ಉದ್ಯೋಗ ಪಡೆಯಲು ಮಾತ್ರವಲ್ಲದೆ ಗೃಹಿಣಿಯದವರಿಗೂ ಶಿಕ್ಷಣದ ಅವಶ್ಯಕತೆಯಿದೆ ಎಂಬುವುದನ್ನು ಅರಿಯಬೇಕು ಎಂದು ಸಲಹೆ ನೀಡಿದ ಶಾಸಕರು ಹೆಣ್ಣೊಂದು ಕಲಿತರೆ ಆ ಕುಟುಂಬವೇ ಶಿಕ್ಷಣ ಕಲಿತಂತಾಗುತ್ತದೆ ಈ ವಿಚಾರವನ್ನು ವಿದ್ಯಾರ್ಥಿನಿಯರು
ಗಂಬೀರವಾಗಿ ಪರಿಗಣಿಸಬೇಕೆಂದು ಕರೆ ನೀಡಿದರು.
ಮೊಬೈಲ್ ಬಳಕೆಯಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗುತ್ತಿರುವುದನ್ನು ಕಾಣುತ್ತಿದ್ದೇವೆ ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್‌ಗಳನ್ನು ಬಳಸುವಾಗ ಶಿಕ್ಷಣಕ್ಕೆ ಸಂಬoಧಿಸಿದ ವಿಷಯಗಳು ಹಾಗೂ ಜ್ಞಾನ ಹೆಚ್ಚಿಸುವ ವಿಚಾರಗಳನ್ನ ತಿಳಿಯುವ ಪ್ರಯತ್ನ ಮಾಡಬೇಕೆಂದು ಕಿವಿ ಮಾತು ಹೇಳಿದರಲ್ಲದೆ ಉತ್ತಮ ಶಿಕ್ಷಣ ಪಡೆಯುವುದರ ಜತೆಗೆ ಒಳ್ಳೆಯ ಸಂಸ್ಕಾರ ಕಲಿಯಬೇಕು ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಶಿವುನಾಯಕ್, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಸುನಿತಾರಮೇಶ್, ಕಾಲೇಜು ಪ್ರಾಂಶುಪಾಲ ಎಚ್.ಕೆ.ಕೃಷ್ಣಯ್ಯ, ಮೈಸೂರು ರಾಮಕೃಷ್ಣ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಎಸ್.ಬಾಲಾಜಿ, ಹುಣಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ರಾಮೇಗೌಡ, ಉಪನ್ಯಾಸಕರಾದ ಡಿ.ಶ್ರೀನಿವಾಸ್, ಕೃಷ್ಣ, ರುಚಿತಕೇಶವ್, ಶಶಿಗೌಡ ಮಾತನಾಡಿದರು.

ಆನಂತರ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಮತ್ತು ಮನೋರಂಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾಂಗ್ರೆಸ್ ಪಕ್ಷದ ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್‌ಜಾಬೀರ್, ಬಗರ್ ಹುಕ್ಕುಂ ಸದಸ್ಯ ಅಪ್ಪಾಜಿಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಲತಾರವಿ, ಮುಖಂಡರಾದ ಹರಿರಾಜ್, ಮಂಜುನಾಥ್,
ಕುಮಾರ್ ಮತ್ತು ಕಾಲೇಜು ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.