ಮೈಸೂರು : ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸುವ ದೂರದೃಷ್ಟಿಯ ಬಜೆಟ್‌ಅನ್ನು ಮಂಡಿಸಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಮೈಸೂರು ನಗರ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ನಾಣಿಗೌಡ ಹೇಳಿದ್ದಾರೆ.
ಬಜೆಟ್ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ, ಈ ಬಜೆಟ್‌ನಲ್ಲಿ ವಿಶೇಷವಾಗಿ, ಪ್ರಧಾನಮಂತ್ರಿ ಧನ-ಧಾನ್ಯ ಕೃಷಿ ಯೋಜನೆ, ಕೃಷಿ ಜಿಲ್ಲೆಗಳ ಅಭಿವೃದ್ಧಿ ಕಾರ್ಯಕ್ರಮ, ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿಯನ್ನು ೩ ಲಕ್ಷದಿಂದ ೫ಲಕ್ಷಕ್ಕೆ ಹೆಚ್ಚಿಸಿರುವುದನ್ನು ಸ್ವಾಗತಿಸುತ್ತೇನೆ. ಜೊತೆಗೆ ಯುವಶಕ್ತಿ ಹಾಗೂ ಮಹಿಳಾ ಸಬಲೀಕರಣ, ಕೇಂದ್ರ-ರಾಜ್ಯ ಸಹಯೋಗಗಳಿಗೆ ಮತ್ತಷ್ಟು ಪ್ರಾಮುಖ್ಯತೆ ನೀಡಲಾಗಿದ್ದು, ನಗರಾಭಿವೃದ್ಧಿ ಮತ್ತು ಮೂಲ ಸೌಕರ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ೨೦೨೫ರಲ್ಲಿ ಕ್ಷಯರೋಗ ನಿರ್ಮೂಲನೆಯ ಗುರಿ ಸೇರಿದಂತೆ ಆರೋಗ್ಯಸೇವಾ ವಲಯಕ್ಕೆ ಕಾಯಕಲ್ಪ ಒದಗಿಸಲಾಗಿದೆ.
ಹೊಸ ಪದ್ಧತಿಯಡಿಯಲ್ಲಿ ಬಂಡವಾಳ ಲಾಭದಂತಹ ವಿಶೇಷ ಆದಾಯ ಹೊರತುಪಡಿಸಿ, ೧೨ ಲಕ್ಷ ಆದಾಯದವರೆಗೆ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿಯ ಕ್ರಮ ಮಧ್ಯಮ ವರ್ಗಗಳಿಗೆ ಹೆಚ್ಚಿನ ಆರ್ಥಿಕ ಬಲವನ್ನು ನೀಡಲಿದೆ. ಒಟ್ಟಿನಲ್ಲಿ ಈ ಸಾಲಿನ ಬಜೆಟ್ ಸ್ವಾವಲಂಬನೆ, ಪ್ರಗತಿ ಮತ್ತು ಜಾಗತಿಕ ಆರ್ಥಿಕತೆಯ ಮುಂಚೂಣಿಯಲ್ಲಿ ಮುನ್ನಡೆಯಲು ಭಾರತವನ್ನು ಸಶಕ್ತಗೊಳಿಸಿದೆ’ ಎಂದು ಅವರು ಹೇಳಿದ್ದಾರೆ.
ಔಷಧಗಳ ಮೇಲಿನ ತೆರಿಗೆ ಕಡಿತ, ಜಿಲ್ಲಾ ಮಟ್ಟದಲ್ಲಿ ಕ್ಯಾನ್ಸರ್ ಅಸ್ಪತ್ರೆ ಪ್ರಾರಂಭಿಸುವ ಮೂಲಕ ಗ್ರಾಮೀಣ ಭಾಗದ ರೈತಾಪಿ ಜನರಿಗೆ ಅನುಕೂಲ ಕಲ್ಪಿಸಿದೆ. ಅಲ್ಲದೇ, ವೈದ್ಯಕೀಯ ಸೀಟುಗಳ ಹೆಚ್ಚಳದಿಂದ ಬಡ ವರ್ಗದ ವಿದ್ಯಾರ್ಥಿಗಳು ವೈದ್ಯರಾಗುವ ಕನಸನ್ನು ಕೇಂದ್ರ ಸರ್ಕಾರ ನನಸು ಮಾಡುವತ್ತ ಹೆಜ್ಜೆ ಹಾಕಿದೆ. ಒಟ್ಟಾರೆ ಈ ಬಜೆಟ್ ರೈತರು ಮತ್ತು ಮಧ್ಯಮ ವರ್ಗದ ರೈತರಿಗೆ ಪೂರಕವಾಗಿದೆ ಎಂದು ನಾಣಿಗೌಡ ಸಂತಸ ವ್ಯಕ್ತಪಡಿಸಿದ್ದಾರೆ.