ಬೆಂಗಳೂರು : ರೈತರು ಮತ್ತು ಜನ ಸಾಮಾನ್ಯರ ಪರವಾಗಿ ಈ ಬಜೆಟ್ ಇಲ್ಲ, ಇದೇನಿದ್ದರೂ ಬರೀ ಕಾರ್ಪೊರೇಟ್ ಉದ್ಯಮಿಗಳ ಪರವಾಗಿದೆ. ಕೇಂದ್ರ ಸರ್ಕಾರ ಶ್ರಮಿಕ ವರ್ಗವನ್ನು ವಂಚಿಸಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ (ರೈತಬಣ) ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಟೀಕಿಸಿದ್ದಾರೆ.
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಅವರು, ೫೦ ಲಕ್ಷದ ೬೫ ಸಾವಿರ ಕೋಟಿ ಗಾತ್ರದ ಬಜೆಟ್‌ನಲ್ಲಿ ರೈತರು ಮತ್ತು ಕೂಲಿ ಕಾಮಿಖರ ಪರವಾಗಿ ಒಂದೇ ಒಂದು ಯೋಜನೆಯೂ ಸಹ ಇಲ್ಲ. ಇದು ರೈತವಿರೋಧಿ ಬಜೆಟ್ ಆಗಿದೆ.
ಮುಖ್ಯವಾಗಿ ದೇಶದ ಬೆನ್ನೆಲುಬು ಆಗಿರುವ ರೈತರಿಗೆ ಯಾವುದೇ ರೀತಿಯ ಉಪಯುಕ್ತ ಯೋಜನೆಗಳನ್ನು ನೀಡದ ಕೇಂದ್ರ ಸರಕಾರವು ತಾನು ಸದಾ ರೈತ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಟೀಕಿಸಿರುವ ಅವರು, ದೇಶದ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕಿತ್ತು. ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ರೈತರಿಗೆ ನೀಡಿದ್ದ ಯಾವೊಂದು ಭರವಸೆಯನ್ನೂ ಈ ಬಜೆಟ್‌ನಲ್ಲಿ ಈಡೇರಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಿಂದ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಿ, ಕೇಂದ್ರದಲ್ಲಿ ಹಣಕಾಸು ಸಚಿವೆಯೂ ಆಗಿರುವ ನಿರ್ಮಲಾ ಸೀತಾರಾಮನ್ ಅವರು, ಮೇಕೆದಾಟು, ಕಳಸಾ ಬಂಡೂರಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಯಾವುದೇ ಅನುದಾನ ನೀಡದೇ ಹೆಚ್ಚು ತೆರಿಗೆ ಪಾವತಿಸುವ ನಮ್ಮ ರಾಜ್ಯಕ್ಕೆ ವಂಚನೆ ಮಾಡಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು.