Sunday, April 20, 2025
Google search engine

Homeರಾಜ್ಯಸುದ್ದಿಜಾಲಪ್ರಕೃತಿದತ್ತ ಸಂಪನ್ಮೂಲ ಬಳಸಿ ಸುಸ್ಥಿರ ಬೇಸಾಯ ಮಾಡಲು ಸಲಹೆ

ಪ್ರಕೃತಿದತ್ತ ಸಂಪನ್ಮೂಲ ಬಳಸಿ ಸುಸ್ಥಿರ ಬೇಸಾಯ ಮಾಡಲು ಸಲಹೆ

ಗುಂಡ್ಲುಪೇಟೆ: ಪ್ರಕೃತಿದತ್ತ ಸಂಪನ್ಮೂಲ ಬಳಸಿಕೊಂಡು ರೈತರು ಸುಸ್ಥಿರ ಬೇಸಾಯ ಮಾಡುವ ಮೂಲಕ ಉತ್ತಮ ಜೀವನವನ್ನು ನಡೆಸಬೇಕು ಎಂದು ನಬಾರ್ಡ್ ಸಂಸ್ಥೆಯ ಡಿಡಿಎಂ ಹಿತ ಜಿ.ಸುವರ್ಣ ಸಲಹೆ ನೀಡಿದರು.

ತಾಲೂಕಿನ ಕೋಟೆಕರೆ ಗ್ರಾಮದಲ್ಲಿ ನಡೆದ ನೂತನ ಜಲಾನಯನ ಅಭಿವೃದ್ಧಿ ಸಮಿತಿಯ ಸದಸ್ಯರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಲಾನಯನ ಪ್ರದೇಶದಲ್ಲಿ ಭೂಸಾರ ಸಂರಕ್ಷಣೆ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವ ತಾಂತ್ರಿಕತೆಗಳನ್ನು ಅನುಷ್ಠಾನಗೊಳಿಸಿದ ನಂತರ ಭೂ ಸವಕಳಿ ಕಡಿಮೆಯಾಗಿ ಮಣ್ಣಿನ ಫಲವತ್ತತೆ ಸುಧಾರಣೆಯಾಗುತ್ತದೆ ಎಂದರು.

ಜಲಾನಯನ ಅಭಿವೃದ್ಧಿ ಸಕಲ ಜೀವಿಗಳ ಸಮೃದ್ಧಿ ಎಂಬ ಮಾತಿದೆ. ಆದ್ದರಿಂದ ಜಲಾನಯನ ಅಭಿವೃದ್ಧಿ ಸಮಿತಿಯವರು ಅತ್ಯಂತ ಕಾಳಜಿಯಿಂದ ಸಮಿತಿ ವತಿಯಿಂದ ಅನುಷ್ಟಾನಗೊಳಿಸಲು ಉದ್ದೇಶಿಸಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಜಲಾನಯನ ಅಭಿವೃದ್ಧಿಯಿಂದ ಗ್ರಾಮದ ಪ್ರತಿಯೊಬ್ಬರಿಗೂ ಅನುಕೂಲವಾಗಲಿರುವ ಹಿನ್ನೆಲೆಯಲ್ಲಿ ಎಲ್ಲರ ಸಹಕಾರ ಪಡೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.

ಜಲಾನಯನ ಅಭಿವೃದ್ಧಿ ಆದಂತೆ ಹೆಚ್ಚು ನೀರು ಮತ್ತು ತೇವಾಂಶ ಲಭ್ಯವಿರುವುದರಿಂದ ರೈತರಾದ ನಿಮಗೆ ಸೂಕ್ತ ಬೆಳೆ ಪದ್ಧತಿ ಅಳವಡಿಸಿಕೊಳ್ಳುವ ಅವಕಾಶ ಇರುತ್ತದೆ. ಆಯ್ಕೆ ಮಾಡಿದ ಬೆಳೆಗಳ ಆಧುನಿಕ ಉತ್ಪಾದನಾ ತಾಂತ್ರಿಕತೆಗಳನ್ನು ಅಳವಡಿಸಿಕೊಂಡರೆ. ಉತ್ಪಾದಕತೆ ಹೆಚ್ಚಾಗುತ್ತದೆ ಎಂದು ತಿಳಿಸಿದರು. ಪ್ರಕೃತಿದತ್ತ ಸಂಪನ್ಮೂಲ ಬಳಸಿಕೊಂಡು ರೈತರು ಸುಸ್ಥ್ಥಿರ ಬೇಸಾಯ ಮಾಡುವ ಮುಖಾಂತರ ಉತ್ತಮ ಜೀವನವನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ಟಾರ್ಡೋ ಸಂಸ್ಥೆ ನಿರ್ದೇಶಕ ಡಾ.ಮೋಹನ್ ಮಾತನಾಡಿ, ಪಂಚಭೂತಗಳಾದ ಬೆಳಕು, ಭೂಮಿ, ನೀರು, ಗಾಳಿ, ಮತ್ತುಉಷ್ಣಾಂಶದಿಂದ ಪರಿಸರ ನಿರ್ಮಾಣವಾಗಿದೆ. ಪ್ರಕೃತಿ ಅವಲಂಬಿಸದೆ ಯಾವುದೂ ಜೀವಿಯೂ ಇರಲು ಸಾಧ್ಯವಿಲ್ಲ. ದಿನ ಕಳೆದಂತೆ ಪಂಚಭೂತಗಳು ಕ್ಷೀಣಿಸುತ್ತಿವೆ. ಇದಕ್ಕೆ ಮನುಷ್ಯನ ಆಸೆ, ಜನಸಂಖ್ಯಾಸ್ಫೋಟ, ಉಳಿಸು, ಬೆಳಸು ಮತ್ತು ಬಳಸು ಎಂಬ ತತ್ವವನ್ನು ಮಾನವ ಮರೆತಿರುವುದೇ ಕಾರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಕೋಟೆಕೆರೆ, ಕುರುಬರಹುಂಡಿ ಹಾಗೂ ಭೋಗಯ್ಯನಹುಂಡಿ ಗ್ರಾಮಗಳ ಸಾವಿರ ಹೆಕ್ಟೇರ್ ವ್ಯವಸಾಯ ಭೂಮಿಗಳನ್ನು ಗುರುತಿಸಿ ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಬಾರ್ಡ್ ಸಹಯೋಗದೊಂದಿಗೆ ನಮ್ಮ ಟಾರ್ಡೋ ಸಂಸ್ಥೆ ಅನುಷ್ಠಾನ ಮಾಡುತ್ತಿದೆ ಎಂದರು.

ಸ್ಪ್ರೆಡ್ ಸ್ವಯಂ ಸೇವಾ ಸಂಸ್ಥೆಯ ನಿರ್ದೇಶಕ ಆನಂದ್ ಸಂಪನ್ಮೂಲವ್ಯಕ್ತಿಗಳಾಗಿ ಜಲಾನಯನ ಅಭಿವೃದ್ಧಿ ಯೋಜನೆಯ ಮಹತ್ವ ತಿಳಿಸಿದರು. ಪಶುವೈದ್ಯ ಡಾ.ಗವಿಸ್ವಾಮಿ, ಕೋಟಿಕೆರೆ ಗ್ರಾಮ ಜಲಾನಯನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಮಹಿಳಾ ಸಂಘಗಳ ಸದಸ್ಯರುಗಳು ಮತ್ತು ಟಾರ್ಡೋ ಸಂಸ್ಥೆಯ ನೌಕರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular