ಮಂಡ್ಯ: ರಾಜ್ಯದಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದು, ಜಿಲ್ಲೆಯ ಜೀವನದಿಗಳು ಬತ್ತುವ ಹಂತಕ್ಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾವೇರಿ , ಶಿಂಷಾ, ಲೋಕ ಪಾವನಿ ನದಿಗಳು ನೀರಿಲ್ಲದೇ ಬತ್ತುವ ಹಂತಕ್ಕೆ ಬಂದಿದ್ದು, ಜೀವನದಿ ಕಾವೇರಿಯಲ್ಲಿ ನೀರಿಲ್ಲದೆ ಬಂಡೆಗಳು, ನದಿ ತಳಭಾಗ ಭೂಮಿ ದರ್ಶನವಾಗುತ್ತಿದೆ.
ಶ್ರೀರಂಗಪಟ್ಟಣ ತಾಲೂಕಿನಲ್ಲಿ ಹರಿಯುವ ಲೋಕಪಾವನಿ ಸಮರ್ಪಕ ಮಳೆಯಾಗದೇ ನೀರಿಲ್ಲದೇ ಲೋಕಪಾವನಿ ನದಿ ಹರಿವು ನಿಲ್ಲಿಸಿದೆ.
ನದಿಯಲ್ಲಿ ನೀರಿಲ್ಲದೆ ಕುಡಿಯುವ ನೀರು ಪೂರೈಕೆ ಮಾಡುವ ಜಾಕ್ವೆಲ್ ಗೆ ಒಡ್ಡು ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ.
ಮಳೆ ಇಲ್ಲದೆ ಜಿಲ್ಲೆಯ ಕುಡಿಯುವ ನೀರಿಗಾಗಿ ಜನತೆ ಹಾಗೂ ಜಾನುವಾರುಗಳು ಕಂಗಾಲಾಗಿದ್ದಾರೆ. ಇನ್ನು ಮುಂದೆಯೂ ಸರಿಯಾಗಿ ಮಳೆಯಾಗದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದ್ದು, ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗುವ ಪರಿಸ್ಥಿತಿ ಇದೆ.
