ಮೈಸೂರು: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಮುಂಚೂಣಿಯಲ್ಲಿದ್ದು, ವಿದ್ಯಾರ್ಥಿಗಳು ಇಸ್ರೊ, ಡಿಆರ್‌ಡಿಒ ಸೇರಿದಂತೆ ಅಗ್ರಮಾನ್ಯ ಸಂಸ್ಥೆಗಳ ಸೇವೆಗೆ ಸೇರುವುದೇ ಮೊದಲ ಗುರಿಯಾಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್.ಶೈಲಜಾ ಸಲಹೆ ನೀಡಿದರು. ಮಾನಸಗಂಗೋತ್ರಿಯ ಸ್ಕೂಲ್ ಆಫ್ ಎಂಜಿನಿಯರಿಂಗ್ ಶುಕ್ರವಾರ ಆಯೋಜಿಸಿದ್ದ ಅಮ್ಯೂಸ್ ೨ಕೆ೨೩ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿನಿಮಾ, ರಂಗಕಲೆ, ವನ್ಯಜೀವಿ ಛಾಯಾಗ್ರಾಹಣ ಸೇರಿದಂತೆ ಸೃಜನಶೀಲ ಕ್ಷೇತ್ರಗಳಲ್ಲಿ ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದವರು ಅಗ್ರಮಾನ್ಯ ಸಾಧನೆ ಮಾಡಿದ್ದಾರೆ. ಕಲೆಯು ಯಾರೊಬ್ಬರನ್ನು ಕೈ ಬಿಡುವುದಿಲ್ಲ. ಹೀಗಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಇನ್ಫೊಸಿಸ್‌ನ ಸುಧಾಮೂರ್ತಿ ಅವರು ಎಂಜಿನಿಯರಿಂಗ್ ಮಾಡಿದ್ದರೂ, ಸಾಹಿತ್ಯ ಹಾಗೂ ಸೇವಾ ಕ್ಷೇತ್ರದಲ್ಲಿ ನಾಡಿಗೆ ಅಮೂಲ್ಯ ಕೊಡುಗೆಯನ್ನು ನೀಡುತ್ತಿದ್ದಾರೆ. ಭಾರತದ ಪ್ರತಿಭಾವಂತರು ಜಾಗತಿಕ ಅಗ್ರಮಾನ್ಯ ಕಂಪೆನಿಗಳ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಮೈಕ್ರೊಸಾಫ್ಟ್‌ನ ಸತ್ಯ ನಾದೆಲ್ಲ, ಗೂಗಲ್ ಇಂಕ್‌ನ ಸುಂದರ್ ಪಿಚೈ ನಮ್ಮ ಸಾಧನೆಯ ಶಿಖರವೇರಿದ್ದಾರೆ ಎಂದು ಉದಾಹರಿಸಿದರು. ಎಂಜಿನಿಯರಿಂಗ್ ನಿಕಾಯದ ಡೀನ್ ಪ್ರೊ.ಬಿ.ಶಂಕರ್ ಮಾತನಾಡಿ, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳು ಹೆಚ್ಚಿದ್ದರಷ್ಟೇ ಸಾಲದು. ಪ್ರತಿಭೆಯೂ ಇರಬೇಕು ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಂಡ ನಂತರ ಜಾಗತಿಕ ಕೋರ್ಸ್‌ಗಳನ್ನು ವಿಶ್ವವಿದ್ಯಾಲಯದಲ್ಲಿ ತರಲಾಗಿದೆ. ರೊಬೊಟಿಕ್, ಆರ್ಕಿಟೆಕ್ಚರ್, ಕೃತಕ ಬುದ್ದಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್ ಸೇರಿದಂತೆ ಹಲವು ವಿಷಯಗಳನ್ನು ಸೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಕೂಲ್ ಆಫ್ ಎಂಜಿನಿಯರಿಂಗ್ ನಿರ್ದೇಶಕ ಡಾ.ಟಿ.ಅನಂತಪದ್ಮನಾಭ, ಸಂಸ್ಥೆಯು ಆರಂಭಗೊಂಡು ಎರಡು ವರ್ಷವಷ್ಟೇ ಆಗಿದೆ. ಈಗಾಗಲೇ ರಾಜ್ಯದ ಅಗ್ರಮಾನ್ಯ ಎಂಜಿನಿಯರಿಂಗ್ ಕಾಲೇಜುಗಳಿಗೆ ಪೈಪೋಟಿ ನೀಡುವತ್ತ ವಿದ್ಯಾರ್ಥಿಗಳು ಪ್ರತಿಭೆಯನ್ನು ಮೆರೆದಿದ್ದಾರೆ. ಕ್ಯಾಂಪಸ್ ಆಯ್ಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಸಂಸ್ಥೆಯ ಸಂಯೋಜಕರಾದ ಡಾ.ಸಿ.ಸುನಿಲ್, ಡಾ.ಟಿ.ಎಂ.ಪ್ರದೀಪ್ ಇದ್ದರು.