ಮೈಸೂರು: ಉದಯಗಿರಿ ಪೊಲೀಸ್ ಠಾಣೆ ಪ್ರಕರಣ ಸಂಬಂಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇರೆಗೆ ಬಂಧಿತನಾಗಿರುವ ಸತೀಶ್ ಅಲಿಯಾಸ್ ಪಾಂಡುರಂಗ ಜಾಮೀನು ಅರ್ಜಿ ವಿಚಾರಣೆ ಫೆ.೧೭ಕ್ಕೆ ಮುಂದೂಡಿಕೆಯಾಗಿದೆ.
ಆರೋಪಿ ಸತೀಶ್ ಅಲಿಯಾಸ್ ಪಾಂಡುರಂಗ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇರೆಗೆ ಉದಯಗಿರಿ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸೋಮವಾರ ಮಧ್ಯರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ಬಳಿಕ ಸತೀಶ್‌ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಅವರ ಪರ ವಕೀಲರು,
ಮೈಸೂರಿನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಈ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿತ್ತು. ಶನಿವಾರ ವಾದ ಮಂಡನೆ ಮಾಡಿದ ಸರ್ಕಾರಿ ವಕೀಲೆ ಸವಿತಾ ಅವರು ಸಮಾಜದಲ್ಲಿ ಶಾಂತಿ ಭಂಗ ಉಂಟಾಗುವ ಆತಂಕದ ಹಿನ್ನೆಲೆಯಲ್ಲಿ ಮತ್ತಷ್ಟು ವಾದ ಮಂಡನೆಗೆ ಕಾಲಾವಾಕಾಶ ಕೇಳಿದರು. ಆರೋಪಿ ಸತೀಶ್ ಪರ ವಕೀಲ ಹ.ಮಾ.ಭಾಸ್ಕರ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಪೊಲೀಸರು ಬಂಧನ ಸಂಬಂಧ ಕೋರ್ಟ್‌ಗೆ ಸರಿಯಾದ ಸಾಕ್ಷಿ ಸಲ್ಲಿಸಿಲ್ಲ. ಯಾವ ಕಾರಣದಿಂದ ಒಂದು ಧರ್ಮದ ಜನರ ಭಾವನೆಗೆ ಧಕ್ಕೆ ಆಗುತ್ತದೆ ಎಂಬುದನ್ನು ತಿಳಿಸಿಲ್ಲ. ಪೊಲೀಸರು ಈಗಾಗಲೇ ಆರೋಪಿಯ ವಿಚಾರಣೆ ಮಾಡಿ ಮುಗಿಸಿದ್ದಾರೆ. ಪೋಸ್ಟ್ ಹಾಕಲಾಗಿದೆ ಎನ್ನಲಾದ ಪೋನ್ ಕೂಡ ಸೀಜ್ ಮಾಡಿದ್ದಾರೆ. ಹಾಗಾಗಿ ಸತೀಶ್‌ಗೆ ಜಾಮೀನು ನೀಡುವಂತೆ ವಾದ ಮಾಡಿದರು.
ವಾದ ಪ್ರತಿವಾದ ಆಲಿಸಿದ ಬಳಿಕ ಎರಡನೇ ಅಪರ ಸಿವಿಲ್ ಕಿರಿಯಶ್ರೇಣಿ ನ್ಯಾಯಾಧೀಶೆ ಸರೋಜ ಅವರು ವಿಚಾರಣೆಯನ್ನು ಫೆ.೧೭ಕ್ಕೆ ಮುಂದೂಡಿದರು. ಜತೆಗೆ ಉರ್ದು ಭಾಷೆಯ ಪದಗಳ ಕನ್ನಡ ಭಾಷಾಂತರ ಮಾಡುವಂತೆ ಸೂಚಿಸಿದರು.