ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಸ್, ಮೆಟ್ರೋ ರೈಲು ಮತ್ತು ಉಪ ನಗರ ರೈಲು ಜೊತೆಗೆ ಭಾರತೀಯ ರೈಲ್ವೆಯಿಂದಲೂ ರೈಲ್ವೆ ಸಂಪರ್ಕ ಒದಗಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಈ ಯೋಜನೆ ಅನುಷ್ಠಾನಕ್ಕೂ ಮುನ್ನಾ ಕೆಲವೊಂದು ತಾಂತ್ರಿಕ ಸವಾಲುಗಳಿದ್ದು,. ಅವುಗಳನ್ನು ಬಗೆಹರಿಸುವತ್ತಾ ರೈಲ್ವೆ ತಂಡ ಕಾರ್ಯೋನ್ಮುಖವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಜನರು ವಿಮಾನ ನಿಲ್ದಾಣಕ್ಕೆ ರಸ್ತೆ ಮತ್ತು ಮೆಟ್ರೋ ರೈಲು ಮತ್ತು ಉಪ ನಗರ ರೈಲು ಮೂಲಕ ಪ್ರಯಾಣಿಸುತ್ತಿದ್ದಾರೆ. ಇವುಗಳ ಜೊತೆಗೆ ವಿಮಾನ ನಿಲ್ದಾಣದಿಂದ ಬೆಂಗಳೂರು ನಗರಕ್ಕೆ ರೈಲು ಸಂಪರ್ಕವನ್ನು ಒದಗಿಸಲಾಗುವುದು ಎಂದರು.
ಬೆಂಗಳೂರಿಗೆ ತನ್ನ ಕೊನೆಯ ಭೇಟಿ ಸಂದರ್ಭದಲ್ಲಿ ವಿಮಾನ ನಿಲ್ದಾಣದಿಂದ ನಗರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದನ್ನು ನೆನಪಿಸಿಕೊಂಡ ಸಚಿವರು, ಆರಾಮದಾಯಕ ೪೦ ರಿಂದ ೪೫ ನಿಮಿಷಗಳ ಪ್ರಯಾಣ ಎಂದು ಅರಿತುಕೊಂಡೆ. ಆದಾಗ್ಯೂ, ಕೆಲವು ತಾಂತ್ರಿಕ ಸಮಸ್ಯೆಗಳಿದ್ದವು. ವಿಶೇಷವಾಗಿ ರೈಲು ಮೇಲ್ಸುತುವೆಯನ್ನು ನಿರ್ಮಿಸುವ ಅವಶ್ಯಕತೆಯಿದೆ. ತಂಡ ಈ ಕೆಲಸವನ್ನು ಪೂರ್ಣಗೊಳಿಸಿದ್ದು, ಯೋಜನೆಯ ಪರಿಕಲ್ಪನೆಯನ್ನು ನನಗೆ ನೀಡಲಿದ್ದಾರೆ. ಅದನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇದು ಜನರಿಗೆ ಗಮನಾರ್ಹ ಪರಿಹಾರವನ್ನು ತರುತ್ತದೆ ಎಂದರು.
ಉಪ ನಗರ ರೈಲು ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ರೈಲ್ವೆ ತಾಂತ್ರಿಕ ಕೇಡರ್‌ನಿಂದ ಪೂರ್ಣ ಅವಧಿಯ ವ್ಯವಸ್ಥಾಪಕ ನಿರ್ದೇಶಕರು ನೇಮಕ ಮಾಡಬೇಕು. ಇದು ಆಗದೇ ಕಾಮಗಾರಿಯಲ್ಲಿ ಪ್ರಗತಿ ಕುಂಠಿತವಾಗಲಿದೆ ಎಂದು ಹೇಳಿದರು.