ಸಾಲಿಗ್ರಾಮ: ನರೇಗಾ ಯೋಜನೆಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಗ್ರಾ.ಪಂ. ಪಿಡಿಓ ಎಚ್.ಡಿ.ಮಂಜುನಾಥ್ ಹೇಳಿದರು.
ಅವರು ಪಟ್ಟಣದ ಗ್ರಾ.ಪಂ. ಆವರಣದಲ್ಲಿ ಆಯೋಜಿಸಿದ್ದ ರೋಜಗಾರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ರಾಮೀಣ ಭಾಗದ ಜನರು ವಲಸೆ ಹೋಗುವುದನ್ನು ತಡೆಗಟ್ಟಲು ಹಾಗೂ ಗ್ರಾಮೀಣ ಭಾಗದಲ್ಲಿಯೇ ಜೀವನ ನಿರ್ವಹಣೆ ಮಾಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಆರ್ಥಿಕ ವರ್ಷದಲ್ಲಿ ಒಂದು ಕುಟುಂಬಕ್ಕೆ ೧೦೦ ದಿನಗಳ ಕೆಲಸ ನೀಡುವ ಮೂಲಕ ತಮ್ಮ ಸ್ವಂತ ಗ್ರಾಮಗಳಲ್ಲಿ ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಕೆಲಸಕ್ಕೆ ಹೋಗುವ ಮೂಲಕ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ನರೇಗಾ ಯೋಜನೆಯಡಿ ದಿನಕ್ಕೆ ೩೧೬ ರೂಪಾಯಿ ಕೂಲಿ ಇದ್ದು, ಸಮಾನ ಕೂಲಿ, ಸಮಾನ ವೇತನ, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆಯಲ್ಲಿ ಪಾಲ್ಗೊಂಡು ಅದರ ಉಪಯೋಗವನ್ನು ಪಡೆದುಕೊಳ್ಳಬೇಕು. ಸ್ಥಳೀಯ ಗ್ರಾಮ ಪಂಚಾಯಿತಿಗೆ ನಮೂನೆ ೦೬ ರಲ್ಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದಲ್ಲಿ ತಕ್ಷಣ ಕೆಲಸ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಐ.ಇ.ಸಿ ಸಂಯೋಜಕ ಬಿ.ಸಿ.ಸಂಜಯ್, ದ್ವಿತೀಯ ದರ್ಜೆ ಸಹಾಯಕಿ ಅಶ್ವಿನಿ, ಬಿಲ್ ಕಲೆಕ್ಟರ್ ಮಧು, ಡಿಇಒ ಅವಿನಾಶ್, ಅಕ್ಷಯ್, ಕೆ.ಎಚ್.ಪಿ.ಟಿ ಸಂಯೋಜಕ ಪ್ರದೀಪ್ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.