ಮೈಸೂರು: ರಾಜ್ಯದಲ್ಲಿ ಮೊನ್ನೆ ವಿಪಕ್ಷಗಳು ಸಭೆ ನಡೆಸಿದ್ದರು. ಅವರು ಸಭೆ ನಡೆಸಿದ್ದಕ್ಕೆ ನಮಗೆ ತಕರಾರಿಲ್ಲ. ಆ ಸಭೆಗೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಕ್ಕೆ ನಮ್ಮ ವಿರೋಧವಿದೆ ಎಂದು ಶಾಸಕ ಶ್ರೀವತ್ಸ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾಡಿದರು.
ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗ ಇಂದು (ಶನಿವಾರ) ಬಿಜೆಪಿ ನಾಯಕರ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರೊಟೋಕಾಲ್ ಎಲ್ಲರಿಗೂ ಅನ್ವಯಿಸುವುದಿಲ್ಲ. ನಾವು ಇದನ್ನ ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಶಾಸಕರನ್ನು ಸದನದಿಂದ 3ದಿನಗಳ ಕಾಲ ಅಮಾನತು ಮಾಡಿದರು ಎಂದರು
ಈ ಹಿಂದೆ ಸಿದ್ದರಾಮಯ್ಯನವರು ವಿಧಾನಸೌಧದ ಬಾಗಿಲಿಗೆ ಬೂಟು ಕಾಲಿನಲ್ಲಿ ಒದ್ದರು. ಪೋಲೀಸ್ ಅಧಿಕಾರಿ ಶಂಕರ್ ಬಿದರಿ ಕೊರಳಿಗೆ ಕೈ ಹಾಕಿದ್ರು. ಶಾಸಕ ಸಂಗಮೇಶ್ ಬಟ್ಟೆ ಹರಿದುಕೊಂಡು ಸ್ಪೀಕರ್ ಗೆ ಅಗೌರವ ತೋರಿದ್ರು. ಜಮೀರ್ ಅಹ್ಮದ್ ಖಾನ್ ಸ್ಪೀಕರ್ ಬಳಿಯಿದ್ದ ಮೈಕ್ ಕಿತ್ತೆಕೊಂಡು ಅಗೌರವ ತೋರಿದ್ರು. ಆಗ ನಾವು ಇವರನ್ನ ಅಮಾನತು ಮಾಡಿದ್ವಾ ? ಎಂದು ಪ್ರಶ್ನಿಸಿದರು.
ನಾವು ಕಾಂಗ್ರೆಸ್ ಗ್ಯಾರಂಟಿ ವಿರೋಧಿಗಳಲ್ಲ. ನೀವು ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಎಲ್ಲರಿಗೂ ಕೊಡಿ ಎಂದು ಹೇಳುತ್ತಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಗೃಹ ಸಚಿವರು ಬೆಂಗಳೂರಿನಲ್ಲಿ ಸಿಕ್ಕ ಶಂಕಿತ ಉಗ್ರರನ್ನು ಉಗ್ರಗಾಮಿಗಳಲ್ಲ ಅಂತ ಹೇಳ್ತಾರೆ. ನಾವು ಸರ್ಕಾರದ ವೈಫಲ್ಯದ ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿಯು ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.