ಆಗಸ್ಟ್ ೧ರಿಂದ ಜಾರಿ
ಬೆಂಗಳೂರು: ವಿದ್ಯುತ್ ದರ ಸೇರಿ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಹೋಟೆಲ್‌ಗಳ ತಿಂಡಿ-ತಿನಿಸುಗಳ ಬೆಲೆಯಲ್ಲಿ ಶೇ ೧೦ರಷ್ಟು ಹೆಚ್ಚಿಸುವುದು ಅನಿವಾರ್ಯವಾಗಲಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.
ಈಗಾಗಲೇ ಅಕ್ಕಿ, ತರಕಾರಿ ಸೇರಿ ದಿನನಿತ್ಯದ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಒಂದು ಕೆ.ಜಿ. ಕಾಫಿ ಪುಡಿಗೆ ರೂ೮೦ರಿಂದ ರೂ೧೦೦ ಹೆಚ್ಚಳವಾಗಿದೆ. ಆಗಸ್ಟ್ ೧ರಿಂದ ಹಾಲಿನ ದರವು ಹೆಚ್ಚಳವಾಗಲಿದೆ. ಇದರಿಂದ, ಕಾಫಿ ಮತ್ತು ಚಹಾ ಬೆಲೆ ರೂ೨ ರಿಂದ ರೂ ೩ ಹೆಚ್ಚಳವಾಗಲಿದೆ. ತಿಂಡಿ-ತಿನಿಸುಗಳ ದರದಲ್ಲಿ ರೂ ೫ ಹಾಗೂ ಊಟಕ್ಕೆ ರೂ ೧೦ ಹೆಚ್ಚಳವಾಗಲಿದೆ. ಈ ಬಗ್ಗೆ ಮಂಗಳವಾರ ನಡೆಯಲಿರುವ ಸಂಘದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸಂಘದ ಗೌರವ ಕಾರ್ಯದರ್ಶಿ ವಿರೇಂದ್ರ ಕಾಮತ್ ಮಾಹಿತಿ ನೀಡಿದರು.
ಈಗಾಗಲೇ ಕೆಲ ಹೋಟೆಲ್‌ಗಳಲ್ಲಿ ದರಗಳನ್ನು ಹೆಚ್ಚಿಸಲಾಗಿದೆ. ಅಧಿಕೃತವಾಗಿ ಆಗಸ್ಟ್ ೧ರಂದು ಎಲ್ಲ ತಿಂಡಿ-ತಿನಿಸುಗಳ ದರಗಳಲ್ಲಿ ಹೆಚ್ಚಳವಾಗಲಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದರು.