ಚಾಮರಾಜನಗರ: ಬಂಡೀಪುರ ಅಭಯಾರಣ್ಯದ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪರಿಸರ ಸೂಕ್ಷ್ಮ ವಲಯದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವ ಮೂಲಕ ರೈತರ ಹಾಗೂ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಬಂಡೀಪುರವು ರಾಜ್ಯದ ಪ್ರಸಿದ್ಧ ಹುಲಿ ಸಂರಕ್ಷಿತ ಅರಣ್ಯವಾಗಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಸಿನಿಮಾ ಶೂಟಿಂಗ್‌ಗೆ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಅನುಮತಿ ನೀಡಿದ್ದು ಸಿನಿಮಾದ ಚಿತ್ರೀಕರಣ ನಡೆದಿದೆ. ಇದೀಗ ಪರಿಸರ ಸೂಕ್ಷ್ಮ ವಲಯದಲ್ಲಿ ಹೇಗೆ ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದಾರೆ? ರಾಜ್ಯ ಸರ್ಕಾರ, ಬಂಡೀಪುರವನ್ನು ಕೇರಳ ಸರ್ಕಾರಕ್ಕೆ ಒತ್ತೆ ಇಡ್ತಿದ್ಯಾ ಎಂದು ಪ್ರಶ್ನಿಸುವ ಮೂಲಕ ಸ್ಥಳೀಯರು ಸರ್ಕಾರದ ವಿರುದ್ಧ ಮುಗಿಬಿದ್ದಿದ್ದಾರೆ.
ವನ್ಯಜೀವಿ ಸೂಕ್ಷ್ಮ ಪ್ರದೇಶದಲ್ಲಿ ಸಾರ್ವಜನಿಕ ವಾಹನಗಳಿಗೆ ನಿಷೇಧವಿದ್ದರೂ ನಿಯಮ ಉಲ್ಲಂಘನೆ ಮಾಡಿ ಅರಣ್ಯ ಇಲಾಖೆ ಶೂಟಿಂಗ್ ಗೆ ಅವಕಾಶ ಮಾಡಿ ಕೊಟ್ಟಿದೆ. ಕೇರಳ ರಾಜ್ಯದ ವಾಹನಗಳನ್ನು ಬಿಟ್ಟು ಸಿನಿಮಾ ಶೂಟಿಂಗ್ ಮಾಡಲು ಅರಣ್ಯ ಇಲಾಖೆ ಅನುಮತಿ ಕೊಟ್ಟಿದೆ.
ಹಿಮವದ್ ಗೋಪಾಲಸ್ವಾಮಿ ಬೆಟ್ಟ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರುವ ಹಿನ್ನಲೆ ಕಾಡು ಪ್ರಾಣಿಗಳಿಗೆ ತೊಂದರೆಯಾಗುವ ನಿಟ್ಟಿನಲ್ಲಿ 2016ರಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಕೇವಲ ಸರ್ಕಾರಿ ಬಸ್ ಮತ್ತು ಇಲಾಖೆ ವಾಹನಗಳಿಗಷ್ಟೇ ಅವಕಾಶವಿದ್ದು, ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಆದರೂ ಸಹ ಬೆಟ್ಟದಲ್ಲಿ ಸಿನಿಮಾ ಶೂಟಿಂಗ್ ಮಾಡಲು ಅವಕಾಶ ಕೊಟ್ಟಿದ್ದು, ಅರಣ್ಯ ಇಲಾಖೆಯ ಈ ನಿರ್ಧಾರಕ್ಕೆ ಪರಿಸರವಾದಿ ಜೋಸೆಫ್ ಹೂವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.