Monday, April 14, 2025
Google search engine

Homeರಾಜಕೀಯಕೇಂದ್ರ ಸರ್ಕಾರದ ಬೆಲೆ ಏರಿಕೆ ಹಾಗೂ ರಾಜ್ಯ ಬಿಜೆಪಿ ನಾಯಕರ ದ್ವಂದ್ವ ನಿಲುವಿನ ವಿರುದ್ಧ ಏ.17...

ಕೇಂದ್ರ ಸರ್ಕಾರದ ಬೆಲೆ ಏರಿಕೆ ಹಾಗೂ ರಾಜ್ಯ ಬಿಜೆಪಿ ನಾಯಕರ ದ್ವಂದ್ವ ನಿಲುವಿನ ವಿರುದ್ಧ ಏ.17 ರಂದು ಪ್ರತಿಭಟನೆ

ಬೆಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಇದೇ ಏ.17 ರಂದು ಎಲ್ಲ ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಪ್ರದೇಶ ಕಾಂಗ್ರೆಸ್ ಸಮಿತಿ ನಿರ್ಧರಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಬೆಲೆ ಏರಿಕೆ ಹಾಗೂ ರಾಜ್ಯ ಬಿಜೆಪಿಯ ಇಬ್ಬಗೆ ನೀತಿಯ ವಿರುದ್ಧ ವಾಗ್ದಾಳಿ ನಡೆಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹೋರಾಟದ ಸ್ವರೂಪವನ್ನು ಶೀಘ್ರ ತಿಳಿಸಲಾಗುತ್ತದೆ. ಆರ್.ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಕೇವಲ ರಾಜ್ಯ ಸರ್ಕಾರ ಏರಿಸಿದ ಹಾಲಿನ ದರ ಮಾತ್ರ ಕಣ್ಣಿಗೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

ಕೇಂದ್ರ ಬಿಜೆಪಿಯಿಂದ ರಾಜ್ಯ ಬಿಜೆಪಿಗೆ ಗಿಫ್ಟ್:

ರಾಜ್ಯ ಬಿಜೆಪಿ ಮುಖಂಡರು ಜನಾಕ್ರೋಶ ಯಾತ್ರೆ ಹೊರಟ ದಿನವೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಗೆ ತಲಾ 2 ರೂ. ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂ. ಹೆಚ್ಚಳ ಮಾಡಿ ಇವರ ಯಾತ್ರೆಗೆ ‘ಗಿಫ್ಟ್’ ಕಳಿಸಿದ್ದಾರೆ. ಇದರ ಬಗ್ಗೆ ಜನಸಾಮಾನ್ಯರು ಮಾಡುತ್ತಿರುವ ಗುಣಗಾನವನ್ನು ಎಲ್ಲರೂ ಕೇಳಬೇಕು. ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿರುವ ಜನಾಕ್ರೋಶ ಯಾತ್ರೆ ಎಂದು ಬಿಜೆಪಿಯವರು ಬೋರ್ಡ್ ಹಾಕಿಕೊಳ್ಳಬೇಕು ಎಂದರು.

ಬುಧವಾರದಂದು ಕಚ್ಚಾ ತೈಲದ ಬೆಲೆ ಶೇ. 4.23 ರಷ್ಟು ಇಳಿಕೆಯಾಗಿದೆ. ಆದರೂ ಕೇಂದ್ರ ಸರ್ಕಾರ ಬೆಲೆ ಇಳಿಕೆ ಮಾಡಿಲ್ಲ. ಪೆಟ್ರೋಲ್ ನ ಮೂಲ ದರ ಪ್ರತಿ ಲೀಟರ್ ಗೆ 42.60 ಪೈಸೆ ಇದೆ. ದೇಶದಾದ್ಯಂತ ಪ್ರತಿ ಲೀಟರ್ ಪೆಟ್ರೋಲ್ 103 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಒಂದು ಲೀಟರ್ ಗೆ ರೂ.60 ರೂ. ಲಾಭ ಸರ್ಕಾರಕ್ಕೆ ಸಿಗುತ್ತಿದೆ. ಡೀಸಲ್ ಬೆಲೆ ರೂ.91 ರೂ. ಇದೆ. ರೂ. 43 ಲಾಭ ಮಾಡುತ್ತಿದ್ದಾರೆ. ಶೇ. 60 ರಷ್ಟು ತೆರಿಗೆ ಪೆಟ್ರೋಲ್, ಡೀಸೆಲ್ ಮೇಲೆ ಹಾಕಿದ್ದಾರೆ ಎಂದರು.

ನಮ್ಮ ಸರ್ಕಾರ ರೈತರ ಬದುಕನ್ನು ಉಳಿಸಲು ಹಾಲಿನ ದರ ಏರಿಕೆ ಮಾಡಿದ್ದೇವೆ. ಬಿಜೆಪಿಯವರು ಜಾನುವಾರುಗಳ ಬೂಸಾ, ಹಿಂಡಿ ಬೆಲೆಯನ್ನು ಏಕೆ ಕಡಿಮೆ ಮಾಡಿಸಲಿಲ್ಲ ಎಂದು ಪ್ರಶ್ನಿಸಿದರು. ಹಾಲಿನ ದರ ರಾಜ್ಯದಲ್ಲಿ ಅತ್ಯಂತ ಕಡಿಮೆಯಿದೆ. ಕರ್ನಾಟಕದಲ್ಲಿ 42 ರೂ. ಇದ್ದರೆ. ಕೇರಳ 52 ರೂ, ಗುಜರಾತ್ 53 ರೂ, ದೆಹಲಿ 55 ರೂ, ಮಹಾರಾಷ್ಟ್ರ 52 ರೂ, ತೆಲಂಗಾಣ 58 ರೂ, ಅಸ್ಸಾಂ 60 ರೂ, ಹರಿಯಾಣ 56 ರೂ, ರಾಜಸ್ಥಾನ 50 ರೂ, ಮಧ್ಯಪ್ರದೇಶ 52 ರೂ, ಪಂಜಾಬ್ 56 ರೂ, ಉತ್ತರ ಪ್ರದೇಶ 56 ರೂ. ಇದೆ ಎಂದು ವಿವರಿಸಿದರು.

ನೀರಿನ ಬೆಲೆ ಏರಿಕೆಯನ್ನು ಅತ್ಯಂತ ಕಡಿಮೆ ಮಾಡಿದ್ದೇವೆ. ಕಸ ಸಂಗ್ರಹಣೆ ಶುಲ್ಕವನ್ನು ಈ ಹಿಂದಿನ ಬಿಜೆಪಿ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಕಡಿಮೆ ನಿಗದಿ ಮಾಡಿ ಬಡವರ ಪರವಾಗಿ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನರ ಬದುಕು ಹಸನಾಗಲಿ ಎಂದು ಗ್ಯಾರಂಟಿ ಯೋಜನೆ ಮೂಲಕ ರೂ.52 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಚಿನ್ನದ ಬೆಲೆ ರೂ. 28 ಸಾವಿರ ರೂ.ಗಳಷ್ಟಿತ್ತು. ಈಗ ರೂ.92 ಸಾವಿರ ದಾಟಿದೆ. 10 ಸಾವಿರವಿದ್ದ ಮೊಬೈಲ್ ದರ 30 ಸಾವಿರ, ರೂ.13 ಸಾವಿರ ವಿದ್ದ 32 ಇಂಚಿನ ಟಿವಿ ರೂ.36 ಸಾವಿರ, 1.5 ಟನ್ ಸಾಮರ್ಥ್ಯದ ಎಸಿ ಬೆಲೆ ರೂ.25 ಸಾವಿರದಿಂದ ರೂ.44 ಸಾವಿರ, ಫ್ರಿಡ್ಜ್ ಬೆಲೆ ರೂ. 10 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಾಗಿದೆ. ರೂ.59 ಇದ್ದ ಡಾಲರ್ ಬೆಲೆ ಈಗ ರೂ. 89 ಆಗಿದೆ. ಸಿಮೆಂಟ್ ಬೆಲೆ 268 ಇದ್ದಿದ್ದು ಈಗ ರೂ.410 ಕ್ಕೆ ಹೆಚ್ಚಳವಾಗಿದೆ. ಈ ಬೆಲೆಯನ್ನೆಲ್ಲಾ ನಿಯಂತ್ರಣ ಮಾಡುವವರು ಯಾರು ಎಂದರು.

ರೂ. 80 ಇದ್ದ ಹೆದ್ದಾರಿ ಟೋಲ್ ಬೆಲೆ 250 ಕ್ಕೂ ಹೆಚ್ಚಾಗಿದೆ. ಇದೆಲ್ಲವು ಅಶೋಕ್ ಅವರಿಗೆ ಕಾಣಿಸುತ್ತಿಲ್ಲವೇ? ಹಾಲಿನ ದರ ಏರಿಕೆ ವಿರೋಧಿಸುವ ನೀವು ರೈತ ವಿರೋಧಿಗಳು. ಬ್ಯಾಂಕ್ ಗಳಲ್ಲಿ ಹಣ ಕಟ್ಟಲು, ಬಿಡಿಸಲು, ಚೆಕ್ ಬುಕ್ ತೆಗೆದುಕೊಳ್ಳಲು ಹೀಗೆ ಎಲ್ಲದಕ್ಕೂ ಶುಲ್ಕ ವಿಧಿಸಿ ಸುಲಿಗೆ ಮಾಡಲಾಗುತ್ತಿದೆ. ಇದು ದೊಡ್ಡ ಹಗರಣವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಹೇಳುತ್ತಿದ್ದರು ಎಂದರು.

ಬಿಜೆಪಿಯವರ ಫೋಟೋ ಹಾಕಿಕೊಳ್ಳಲಿ

ಬಿಜೆಪಿಯವರು ಪ್ರತಿಭಟನಾ ಬ್ಯಾನರ್ ನಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಅವರ ಫೋಟೋಗಳನ್ನು ಹಾಕುವ ಬದಲು ಕೇಂದ್ರ ನಾಯಕರ ಫೋಟೋ ಹಾಕಿಕೊಳ್ಳಿ, ನಮ್ಮ ಬೆಲೆ ಏರಿಕೆ ಬದಲು ಬಿಜೆಪಿ ಬೆಲೆ ಏರಿಕೆಯನ್ನು ಪ್ರಶ್ನಿಸಿ. ನಿಮ್ಮ ಆಕ್ರೋಶ ನಿಮ್ಮ ನಾಯಕರ ಮೇಲಿರಲಿ, ಇದರಿಂದ ಜನರಿಗೆ, ಪಕ್ಷಕ್ಕೆ ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತಿದೆ ಎಂದು ವಿವರಿಸಬೇಕು ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರ ಹೋರಾಟ ಗ್ಯಾರಂಟಿಗಳ ವಿರುದ್ಧ ನಡೆಯುತ್ತಿದೆ. 1 ಕೋಟಿ 22 ಲಕ್ಷ ಮಹಿಳೆಯರು ಗೃಹಲಕ್ಷ್ಮೀ ಲಾಭ ಪಡೆಯುತ್ತಿದ್ದಾರೆ. ತೆಲಂಗಾಣದಲ್ಲಿ ನಮ್ಮ ಪಕ್ಷದ ಸರ್ಕಾರವಿದೆ ಅಲ್ಲಿ 6 ಕೆಜಿ ಅಕ್ಕಿ ಕೊಡುತ್ತಿದ್ದೇವೆ. ನಮ್ಮಲ್ಲಿ 10 ಕೆಜಿ ನೀಡಲಾಗುತ್ತಿದೆ. ನಾವು ಇಷ್ಟರ ಮಟ್ಟಿಗೆ ಗ್ಯಾರಂಟಿಗಳನ್ನು ನೀಡಿ ಯಶಸ್ವಿಯಾಗುತ್ತೇವೆ ಎಂದು ಅವರು ಎಣಿಸಿರಲಿಲ್ಲ ಅದಕ್ಕೆ ಅವರಿಗೆ ಹೊಟ್ಟೆಯುರಿ ಎಂದು ವ್ಯಂಗ್ಯವಾಡಿದರು.

RELATED ARTICLES
- Advertisment -
Google search engine

Most Popular