Saturday, April 19, 2025
Google search engine

Homeರಾಜ್ಯಡೀಸೆಲ್ ದರ, ಟೋಲ್ ಶುಲ್ಕ ವಿರೋಧಿಸಿ ರಾಜ್ಯಾದ್ಯಂತ ಲಾರಿ ಮುಷ್ಕರ ಆರಂಭ: ದಿನನಿತ್ಯದ ಸೇವೆಗಳಲ್ಲಷ್ಟೇ ವಿನಾಯಿತಿ

ಡೀಸೆಲ್ ದರ, ಟೋಲ್ ಶುಲ್ಕ ವಿರೋಧಿಸಿ ರಾಜ್ಯಾದ್ಯಂತ ಲಾರಿ ಮುಷ್ಕರ ಆರಂಭ: ದಿನನಿತ್ಯದ ಸೇವೆಗಳಲ್ಲಷ್ಟೇ ವಿನಾಯಿತಿ

ಬೆಂಗಳೂರು: ಡೀಸೆಲ್‌ ದರ ಮತ್ತು ಟೋಲ್‌ ಶುಲ್ಕ ಪರಿಷ್ಕರಣೆ ಕುರಿತು ಸರ್ಕಾರಕ್ಕೆ ಗಡುವು ನೀಡಿದ್ದರೂ ಯಾವುದೇ ಸ್ಪಂದನೆ ಲಭಿಸದ ಹಿನ್ನೆಲೆಯಲ್ಲಿ, ರಾಜ್ಯ ಲಾರಿ ಮಾಲಕರ ಸಂಘ ಸೋಮವಾರ (ಏ.14) ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕಾಲಿಟ್ಟಿದೆ.

ಈ ಮುಷ್ಕರದ ಪರಿಣಾಮವಾಗಿ ರಾಜ್ಯದಾದ್ಯಂತ ಸುಮಾರು 6 ಲಕ್ಷ ಲಾರಿಗಳ ಸಂಚಾರ ಸ್ತಬ್ಧಗೊಂಡಿದ್ದು, ವಾಣಿಜ್ಯ ಹಾಗೂ ಇತರ ಸರಕು ಸಾಗಣೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ದಿನನಿತ್ಯದ ಅಗತ್ಯ ವಸ್ತುಗಳಾದ ಹಣ್ಣು, ಹಾಲು, ತರಕಾರಿ, ಗ್ಯಾಸ್ ಮತ್ತು ಔಷಧ ಸಾಗಣೆ ಮಾಡುವ ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಲಾರಿ ಮಾಲಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಖಪ್ಪ ಅವರು, ಸರ್ಕಾರ ಡೀಸೆಲ್‌ ದರಗಳನ್ನು ಏರಿಸಿ, ಟೋಲ್ ಶುಲ್ಕ ವಸೂಲಿಸುತ್ತಿದೆ ಹಾಗೂ ಆರ್‌ಟಿಒ ಅಧಿಕಾರಿಗಳಿಂದ ಲಾರಿ ಚಾಲಕರಿಗೆ ಕಿರುಕುಳವಾಗುತ್ತಿದೆ ಎಂಬ ಕಾರಣದಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹೋರಾಟಕ್ಕೆ ಪೆಟ್ರೋಲ್‌ ಬಂಕ್‌ ಸಂಘಗಳು, ಏರ್‌ಪೋರ್ಟ್‌ ಟ್ಯಾಕ್ಸಿ ಒಕ್ಕೂಟಗಳು ಸಹ ಬೆಂಬಲ ಸೂಚಿಸಿವೆ.

ರಾಜ್ಯ ಸರಕಾರಕ್ಕೆ ಡೀಸೆಲ್‌ ದರ ಇಳಿಕೆಗೆ ಏಪ್ರಿಲ್‌ 14ರ ವರೆಗೆ ಗಡುವು ನೀಡಲಾಗಿತ್ತು. ಆದರೆ ಯಾವುದೇ ಸ್ಪಂದನೆ ಇಲ್ಲದ ಕಾರಣ ಮುಷ್ಕರ ಅನಿವಾರ್ಯವಾಗಿದೆ ಎಂದು ಷಣ್ಮುಖಪ್ಪ ಹೇಳಿದರು. ಮಂಗಳೂರಿನಲ್ಲಿ ಕೆಲ ಪೆಟ್ರೋಲ್‌ ಬಂಕ್‌ಗಳು ಈಗಾಗಲೇ ಸೇವೆ ನಿಲ್ಲಿಸಿವೆ. ಸರ್ಕಾರ ಮಾತುಕತೆಗೆ ಆಹ್ವಾನಿಸಿದರೆ, ಮುಷ್ಕರ ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ಕರ್ನಾಟಕ ಸರಕು ಸಾಗಣೆದಾರರ ಸಂಘ ಸಹ ಮುಷ್ಕರಕ್ಕೆ ಬೆಂಬಲ ನೀಡಿದ್ದು, ಲಾರಿ ಉದ್ಯಮ ಲಾಭರಹಿತವಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಡೀಸೆಲ್‌ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಸರಿಯಲ್ಲ. ಇದು ವ್ಯಾಪಾರ-ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಲಿದೆ. ಆದ್ದರಿಂದ ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಸಂಘದ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular