ಯಾದಗಿರಿ: ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಹೈಟೆನ್ಷನ್ ಲೈನ್ ತಗುಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಯಾದಗಿರಿಯ ಮಾತಾಮಣಿಕೇಶ್ವರ ನಗರದಲ್ಲಿ ನಡೆದಿದೆ.
ಮೃತ ವ್ಯಕ್ತಿ ವಡಗೇರಾ ತಾಲೂಕಿನ ಬಬಲಾದ ಗ್ರಾಮದ ನಿವಾಸಿ ಕಾಜಾ ಪಟೇಲ್ (23) ಎಂದು ಗುರುತಿಸಲಾಗಿದೆ. ಅವರು ತಮ್ಮ ಸಹೋದರಿಯ ಮನೆಗೆ ಹೋಗಿ ವಾಪಸ್ ಆಗುತ್ತಿದ್ದ ವೇಳೆ ರಸ್ತೆಗೆ ಬಿದ್ದಿದ್ದ ಹೈಟೆನ್ಷನ್ ತಂತಿಯನ್ನು ಗಮನಿಸದೆ ಬೈಕ್‌ನಲ್ಲಿ ಸಾಗುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಹೈಟೆನ್ಷನ್ ಲೈನ್ ಮೂರು ದಿನಗಳ ಹಿಂದೆ ಬಿರುಗಾಳಿ ಹಾಗೂ ಮಳೆಗೆ ತುಂಡರಿಸಿ ಬಿದ್ದಿತ್ತು. ಆದರೆ ಜೆಸ್ಕಾಂ ಅಧಿಕಾರಿಗಳು ಅದನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬುದು ಸಾರ್ವಜನಿಕರ ಆರೋಪ. ಈ ನಿರ್ಲಕ್ಷ್ಯವೇ ಕಾಜಾ ಪಟೇಲ್ ಅವರ ಪ್ರಾಣಹಾನಿಗೆ ಕಾರಣವಾಗಿದೆ.
ಘಟನೆ ಹಿನ್ನೆಲೆ ಸಾರ್ವಜನಿಕರು ಜೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅವ್ಯವಸ್ಥೆಯ ವಿರುದ್ಧ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಘಟನಾ ಸ್ಥಳಕ್ಕೆ ಜಮಾಯಿಸಿದ್ದು, ಇಲಾಖೆಯ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ.
ಈ ಕುರಿತು ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ಈ ಘಟನೆ ಜೆಸ್ಕಾಂ ಅಧಿಕಾರಿಗಳ ಜವಾಬ್ದಾರಿತನದ ಕೊರತೆಯನ್ನ ಹೊರಹಾಕಿದ್ದು, ಭವಿಷ್ಯದಲ್ಲಿ ಇಂಥ ದುರಂತಗಳು ಸಂಭವಿಸದಂತೆ ತ್ವರಿತ ಕ್ರಮ ಕೈಗೊಳ್ಳುವ ಅಗತ್ಯವಿದೆ.