Saturday, April 19, 2025
Google search engine

Homeಅಪರಾಧಕಾನೂನುಮೂವರು ಜಿಲ್ಲಾಧಿಕಾರಿ, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ತನಿಖೆಗೆ ಆಯೋಗ ಶಿಫಾರಸು

ಮೂವರು ಜಿಲ್ಲಾಧಿಕಾರಿ, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ತನಿಖೆಗೆ ಆಯೋಗ ಶಿಫಾರಸು

ಬೆಂಗಳೂರು: ರಾಜ್ಯದಲ್ಲಿ ಕೊವೀಡ್ ಸಮಯದಲ್ಲಿ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಿರುವ ನಿವೃತ್ತ ನ್ಯಾ.ಮೈಕೆಲ್ ಡಿ’ಕುನ್ಹಾ ನೇತೃತ್ವದ ಆಯೋಗ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉನ್ನತ ಅಧಿಕಾರಿಗಳು ಮತ್ತು ಬೆಂಗಳೂರು ಗ್ರಾಮಾಂತರ, ಗದಗ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳ ವಿರುದ್ಧ ತನಿಖೆಗೆ ಶಿಫಾರಸು ಮಾಡಿದೆ.

ಆಯೋಗದ ಎರಡನೇ ವರದಿಯ ಪ್ರಕಾರ, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಚಿಮ ಮತ್ತು ಯಲಹಂಕ ವಲಯಗಳಲ್ಲಿ ಕೋವಿಡ್‌ ಉಪಕರಣಗಳ ಖರೀದಿಗೆ ಖರ್ಚು ಮಾಡಿದ 184.62 ಕೋಟಿ ರೂ.ಗಳಲ್ಲಿ ಶೇ 61.31 ರಷ್ಟು ಅಂದರೆ 113.09 ಕೋಟಿ ರೂ. ಮೌಲ್ಯದ ಅಕ್ರಮ ನಡೆದಿದೆ. ಆಯೋಗವು ಮಾರ್ಚ್ 2020 ರಿಂದ ಡಿಸೆಂಬರ್ 2022ರವರೆಗೆ ನಡೆದ ಈ ಅಕ್ರಮಗಳನ್ನು ಪಟ್ಟಿ ಮಾಡಿದೆ.

ಅದೇ ರೀತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 27.83 ಕೋಟಿ ರೂ.ಅಕ್ರಮ, ಗದಗ ಜಿಲ್ಲೆಯಲ್ಲಿ 11.56 ಕೋಟಿ ರೂ., ಕೊಪ್ಪಳ ಜಿಲ್ಲೆಯಲ್ಲಿ 5.04 ಕೋಟಿ ರೂ. ಅಕ್ರಮ ನಡೆದಿದೆ. ಈ ಅಕ್ರಮಕ್ಕೆ ಕಾರಣರಾದ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವರದಿ ಶಿಫಾರಸು ಮಾಡಿದೆ.

ಉಪಕರಣಗಳ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗೆ ಧಕ್ಕೆ, ನಿಯಮ ಉಲ್ಲಂಘನೆ, ಕಡತ ನಿರ್ವಹಣೆಯಲ್ಲಿನ ಲೋಪಗಳು, ಕಂಪನಿಗಳಿಗೆ ನೆರವಾಗುವ ಉದ್ದೇಶದಿಂದ ಅಕ್ರಮಗಳನ್ನು ಎಸಗಲಾಗಿದೆ ಎಂಬ ಆರೋಪ ಮಾಡಲಾಗಿದೆ. ಕೆಲವೆಡೆ ಖರೀದಿಗೆ ಸಂಬಂಧಿಸಿದ ಕಡತಗಳ ಸಂಖ್ಯೆಗಳಲ್ಲಿ ಹೊಂದಾಣಿಕೆಯಿಲ್ಲದೆ, ಅವುಗಳನ್ನು ಮರೆಮಾಡಲಾಗಿದೆ ಎಂಬ ಅನುಮಾನವನ್ನು ಆಯೋಗ ವ್ಯಕ್ತಪಡಿಸಿದೆ.

ವ್ಯವಹಾರದಲ್ಲಿ ನಷ್ಟ ಅನುಭವಿಸಿದ ಸರ್ಕಾರಕ್ಕೆ ಮರುಪಾವತಿ ಆಗದಂತೆ ಕ್ರಮ ಕೈಗೊಳ್ಳಬೇಕು. ಅಕ್ರಮದಿಂದ ಲಾಭ ಪಡೆದ ಕಂಪನಿಗಳಿಂದಲೇ ನಷ್ಟದ ಮೊತ್ತ ವಸೂಲಿ ಮಾಡಬೇಕು ಎಂಬುದು ಶಿಫಾರಸುಗಳಲ್ಲೊಂದು. ಈ ವರದಿ ಏಪ್ರಿಲ್ 5ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಅದರ ಆಧಾರದ ಮೇಲೆ ವಿಶೇಷ ತನಿಖಾ ತಂಡ (SIT) ತನಿಖೆ ಮುಂದುವರಿಸುವ ಸಾಧ್ಯತೆಯಿದೆ.

ಆಗಸ್ಟ್ 2023ರಲ್ಲಿ ರಚನೆಯಾದ ಆಯೋಗವು ತನ್ನ ಮೊದಲ ವರದಿಯನ್ನು ಆಗಸ್ಟ್ 2024ರಲ್ಲಿ ಸಲ್ಲಿಸಿತ್ತು. ಇದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು.

RELATED ARTICLES
- Advertisment -
Google search engine

Most Popular