ಗುಂಡ್ಲುಪೇಟೆ: ಪ್ಲಾಸ್ಟಿಕ್ ಮುಕ್ತ ಅಭಿಯಾನದ ಅಂಗವಾಗಿ ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ನಿಷೇಧ ಹಾಗೂ ಕಸ ವಿಂಗಡಣೆ ಕುರಿತು ಅರಿವು ಮೂಡಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ವಸಂತ ಕುಮಾರಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಮೂಲಕ ಅಂಗಡಿಗಳಿಗೆ ಕೊಳ್ಳಲು ಬರುವ ವ್ಯಾಪಾರಸ್ಥರಿಗೆ ಬಟ್ಟೆ ಬ್ಯಾಗ್ ನೀಡಬೇಕು. ಇದರಿಂದ ಮಾತ್ರ ಪ್ಲಾಸ್ಟಿಕ್ ಮುಕ್ತ ಮಾಡಲು ಸಾಧ್ಯ ಎಂದು ತಿಳಿಸಿದರು.
ಪುರಸಭೆ ವಾಹನ ಮನೆ ಮುಂದೆ ಬರಲಿದ್ದು, ಮಾಲೀಕರು ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ವಾಹನಗಳಿಗೆ ನೀಡಬೇಕು. ಇದರಿಂದ ಮಾತ್ರ ಸ್ವಚ್ಛ ಪಟ್ಟಣವಾಗಿ ಮಾರ್ಪಾಡಾಗುತ್ತದೆ. ಸ್ವ ಸಹಾಯ ಸಂಘದವರು ಮನೆಗಳಿಗೆ ಭೇಟಿ ಕೊಟ್ಟಾಗಿ ಪ್ಲಾಸ್ಟಿಕ್ ನಿಷೇಧ ಬಳಕೆ ಹಾಗೂ ಕಸ ವಿಂಗಡಣೆ ಕುರಿತು ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಸೂಚಿಸಿದರು.
ಈ ವೇಳೆ ಪುರಸಭೆ ಸದಸ್ಯರಾದ ಎನ್.ಕುಮಾರ್, ರಾಜಗೋಪಾಲ್ ಸೇರಿದಂತೆ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.