ಗುಂಡ್ಲುಪೇಟೆ: ಹದಿಹರೆಯದ ಮಕ್ಕಳು ಮಾನಸಿಕ ಒತ್ತಡಕ್ಕೆ ಬಲಿಯಾಗದೆ ಸರಿಯಾದ ಸಮಯಕ್ಕೆ ಆಹಾರ ಸೇವನೆ, ಸೂಕ್ತ ವ್ಯಾಯಾಮ ಮಾಡಿ ಆರೋಗ್ಯ ವೃದ್ಧಿಸಿಕೊಳ್ಳಿ ಎಂದು ವೈದ್ಯರಾದ ಡಾ.ಹರೀಶ್ ಸಲಹೆ ನೀಡಿದರು.
ಪಟ್ಟಣದ ಗೌತಮ್ ಕಾಲೇಜಿನಲ್ಲಿ ತಾಲೂಕು ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ ಬ್ಲಾಕ್ ಸೊಸೈಟಿ ಹಗೂ ಗೌತಮ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆದ ಹದಿಹರೆಯದ ಮಕ್ಕಳ ಆರೋಗ್ಯ ಮತ್ತು ಸ್ವಚ್ಛತೆ ಹಾಗೂ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹದಿಹರೆಯದವರು ನಿಗಧಿತ ಸಮಯಕ್ಕೆ ನಿದ್ರೆ, ವಿಶ್ರಾಂತಿ ಪಡೆಯಬೇಕು. ಪ್ರತಿದಿನ ವ್ಯಾಯಾಮ ಮಾಡಿದರೆ ದೈಹಿಕ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಜೊತೆಗೆ ವೈಯಕ್ತಿಕ ಸ್ವಚ್ಛತೆಕಡೆಗೆ ಹೆಚ್ಚಿನ ಗಮನ ಕೊಟ್ಟು ಋತು ಚಕ್ರದ ಬಗ್ಗೆ ತುಂಬಾ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಕಾಳಿಂಗಸ್ವಾಮಿ ಸಿದ್ದಾರ್ಥ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಬಿಡಿ, ಸಿಗರೇಟ್, ಡ್ರಗ್ಸ್ ಗೆ ಸೇವಿಸಿ ತಮ್ಮ ಯವ್ವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಸ್ವಾಮಿ ವಿವೇಕಾನಂದ ಮಾರ್ಗದಲ್ಲಿ ಮಡೆಯುವ ಮೂಲಕ ಅವರ ತತ್ವ ಪಾಲಿಸಿ ದೇಶ ಅಭಿವೃದ್ಧಿಗೆ ಯುವ ಜನತೆ ಮಾದರಿಯಾಗಬೇಕು ಎಂದು ತಿಳಿಸಿದರು.
ವಕೀಲರಾದ ಎಂ.ಎನ್.ಸಂಪತ್, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗುವಂತೆ ಮಾಡಬೇಕು. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ದತಿಗೆ ಮಕ್ಕಳನ್ನು ದೂಕಬಾರದು. ಇದರಿಂದ ಮಕ್ಕಳ ಬಾಲ್ಯಾವಸ್ಥೆ ಹಾಳಾಗುತ್ತದೆ. ನಿಮ್ಮಿಂದ ಸಮಾಜಕ್ಕೆ ಏನನ್ನು ನೀಡಲು ಸಾಧ್ಯವಿಲ್ಲ. ಆದ್ದರಿಂದ ಉನ್ನತ ಶಿಕ್ಷಣ ಕಲಿತರೆ ಇತರರಿಗೆ ಮಾರ್ಗದರ್ಶಕರಾಗಿ ರೂಪುಗೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಗೌತಮ್ ಸಂಸ್ಥೆ ಕಾರ್ಯ ದರ್ಶಿ ಕೆ.ಸಿ.ಸಿದ್ದರಾಜು, ಸಿಡಿಪಿಓ ಹೇಮಾವತಿ, ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ ಬ್ಲಾಕ್ ಸೊಸೈಟಿ ಅಧ್ಯಕ್ಷೆ ದ್ರಾಕ್ಷಾಯಿಣಮ್ಮ, ಸಂಯೋಜಕರು ಎಂ.ಗುರುಮಲ್ಲಮ್ಮ, ಕಾಲೇಜು ಪ್ರಾಚಾರ್ಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.